ಪ್ರಜ್ಞೇಶ್ ಎರಡನೇ ಸುತ್ತಿಗೆ ಪ್ರವೇಶ
ಮೆಲ್ಬೋರ್ನ್, ಜ.9: ಭಾರತದ ಅಗ್ರಮಾನ್ಯ ಸಿಂಗಲ್ಸ್ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಸುತ್ತಿಗೆ ತೇರ್ಗಡೆಯಾದರು.
ಬುಧವಾರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಎಡಗೈ ಆಟಗಾರ ಪ್ರಜ್ಞೇಶ್ ಕ್ರೊಯೇಶಿಯದ ವಿಕ್ಟರ್ ಗಾಲೊವಿಕ್ ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಆರನೇ ಶ್ರೇಯಾಂಕದ ಪ್ರಜ್ಞೇಶ್ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ 213ನೇ ರ್ಯಾಂಕಿನ ಆಟಗಾರ ಎನ್ರಿಕ್ ಲೊಪೆಝ್ ಪೆರೆಝ್‌ರನ್ನು ಎದುರಿಸಲಿದ್ದಾರೆ.
ಪ್ರಜ್ಞೇಶ್ 2018ರ ಋತುವಿನಲ್ಲಿ ನಾಲ್ಕು ಚಾಲೆಂಜರ್ ಮಟ್ಟದ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದು ಎರಡು ಪ್ರಶಸ್ತಿಯನ್ನು ಜಯಿಸಿದ್ದಾರೆ. ಫ್ರೆಂಚ್ ಓಪನ್ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದ ಪ್ರಜ್ಞೇಶ್ ಮೊತ್ತ ಮೊದಲ ಗ್ರಾನ್‌ಸ್ಲಾಮ್ ಪಂದ್ಯ ಆಡುವ ಹೊಸ್ತಿಲಲ್ಲಿ ಎಡವಿದ್ದರು.
ಪ್ರಜ್ಞೇಶ್ ಫ್ರೆಂಚ್ ಓಪನ್‌ನ ಅರ್ಹತಾ ಟೂರ್ನಿಯ ಮೂರನೇ ಸುತ್ತಿನಲ್ಲಿ ಇಲಿಯಾಸ್ ಯಮೆರ್‌ಗೆ ಸೋತಿದ್ದರು. ‘‘ಇದೊಂದು ಸಾಧಾರಣ ಪಂದ್ಯವಾಗಿತ್ತು. ನಾನು ಮೊದಲ ಸೆಟ್‌ನಲ್ಲಿ ಹಿಡಿತವನ್ನು ಕೊನೆಯ ತನಕ ಕಾಯ್ದುಕೊಂಡಿದ್ದೇನೆ’’ ಎಂದು ಪ್ರಜ್ಞೇಶ್ ಪ್ರತಿಕ್ರಿಯಿಸಿದ್ದಾರೆ.