ವರ್ಷದ ಆಫ್ರಿಕ ಆಟಗಾರ ಪ್ರಶಸ್ತಿ ಉಳಿಸಿಕೊಂಡ ಸಲಾಹ್
ಸೆನೆಗಲ್, ಜ.9: ಲಿವರ್‌ಪೂಲ್ ಸ್ಟಾರ್ ಫುಟ್ಬಾಲ್ ಆಟಗಾರ ಮುಹಮ್ಮದ್ ಸಲಾಹ್ ವರ್ಷದ ಆಫ್ರಿಕ ಆಟಗಾರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. 26ರ ಹರೆಯದ ಸಲಾಹ್ ಸೆನೆಗಲ್ ಕ್ಲಬ್‌ನ ಸಹ ಆಟಗಾರ ಸಾಡಿಯೊ ಮಾನ್ ಹಾಗೂ ಅರ್ಸೆಲ್ ಸ್ಟ್ರೈಕರ್ ಪೀರ್-ಎಮೆರಿಕ್‌ರನ್ನು ಹಿಂದಿಕ್ಕಿ ಪ್ರಶಸ್ತಿ ತನ್ನದಾಗಿಸಿಕೊಂಡರು. ‘‘ನನಗೆ ಬಾಲ್ಯದಲ್ಲೇ ಈ ಪ್ರಶಸ್ತಿ ಗೆಲ್ಲಬೇಕೆಂಬ ಕನಸಿತ್ತು. ಇದೀಗ ನಾನು ಸತತ ಎರಡನೇ ಬಾರಿ ಈ ಪ್ರಶಸ್ತಿಗೆ ಪಾತ್ರನಾಗಿದ್ದೇನೆ. ನನ್ನ ಕುಟುಂಬದವರು, ಸಹ ಆಟಗಾರರು, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವೆ. ಈ ಟ್ರೋಫಿಯನ್ನು ನನ್ನ ತಾಯ್ನೋಡು ಈಜಿಪ್ಟ್‌ಗೆ ಸಮರ್ಪಿಸುವೆ’’ ಎಂದು ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಟ್ರೋಫಿ ಸ್ವೀಕರಿಸಿದ ಬಳಿಕ ಸಲಾಹ್ ಹೇಳಿದ್ದಾರೆ.
ಸಲಾಹ್ ಕಳೆದ ವರ್ಷ ಆಫ್ರಿಕದ ಶ್ರೇಷ್ಠ ಫುಟ್ಬಾಲ್ ಪಟು ಪ್ರಶಸ್ತಿ ಜಯಿಸಿದ ಈಜಿಪ್ಟ್‌ನ ಎರಡನೇ ಆಟಗಾರ ಎನಿಸಿಕೊಂಡಿದ್ದರು. 1983ರಲ್ಲಿ ಮುಹಮ್ಮದ್ ಅಲ್ ಖತಿಬ್ ಈ ಸಾಧನೆ ಮಾಡಿದ್ದರು.
ಸಲಾಹ್ ಈ ಋತುವಿನಲ್ಲಿ ಲಿವರ್‌ಪೂಲ್ ಪರ ಎಲ್ಲ ಪಂದ್ಯಾವಳಿಯಲ್ಲಿ ಒಟ್ಟು 44 ಗೋಲುಗಳನ್ನು ಗಳಿಸಿದ್ದರು.