ಭಾರತಕ್ಕೆ ಅಗ್ರಸ್ಥಾನಕ್ಕೇರುವ ಅವಕಾಶ
ದುಬೈ,ಜ.9: ಐಸಿಸಿ ರ್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಜಸ್‌ಪ್ರಿತ್ ಬುಮ್ರಾ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಮುಂದಿನ ದಿನಗಳಲ್ಲಿ 8 ಪಂದ್ಯಗಳನ್ನು ಆಡಲಿರುವ ಭಾರತಕ್ಕೆ ನಂ.1 ಸ್ಥಾನದಲ್ಲಿರುವ ಇಂಗ್ಲೆಂಡ್‌ಗೆ ನಿಕಟ ಪೈಪೋಟಿ ನೀಡುವ ಅವಕಾಶವಿದೆ.
ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 3 ಪಂದ್ಯಗಳನ್ನು ಹಾಗೂ ನ್ಯೂಝಿಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯನ್ನು ಆಡಲಿದೆ. ಒಂದು ವೇಳೆ ಭಾರತ ಎಲ್ಲ 8 ಪಂದ್ಯಗಳನ್ನು ಜಯಿಸಲು ಸಮರ್ಥವಾದರೆ 125 ಅಂಕ ಗಳಿಸಲಿದೆ. ಇಂಗ್ಲೆಂಡ್‌ಗಿಂತ ಒಂದು ಅಂಕ ಹಿಂದುಳಿಯಲಿದೆ.
ಪ್ರಸ್ತುತ ಇಂಗ್ಲೆಂಡ್ 126 ಅಂಕ ಗಳಿಸಿ ತಂಡಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದೆ. 121 ಅಂಕ ಗಳಿಸಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಕೊಹ್ಲಿ(1) ಹಾಗೂ ರೋಹಿತ್ ಶರ್ಮಾ(2)ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಬುಮ್ರಾ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನದ ರಶೀದ್ ಖಾನ್ ಹಾಗೂ ಕುಲ್‌ದೀಪ್ ಯಾದವ್ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ.
ಭಾರತದ ಇತರ ಆಟಗಾರರಾದ ಶಿಖರ್ ಧವನ್ 9ನೇ ಸ್ಥಾನದಲ್ಲಿದ್ದರೆ, ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಇಂಗ್ಲೆಂಡ್‌ನ ಆದಿಲ್ ರಶೀದ್‌ರೊಂದಿಗೆ 6ನೇ ಸ್ಥಾನ ಹಂಚಿಕೊಂಡಿದ್ದಾರೆ.
ಇತರ ತಂಡಗಳ ಆಟಗಾರರು ರ್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ.
ನ್ಯೂಝಿಲೆಂಡ್‌ನ ಲೆಗ್ ಸ್ಪಿನ್ನರ್ ಐಶ್ ಸೋಧಿ ಹಾಗೂ ವೇಗದ ಬೌಲರ್ ಫರ್ಗ್ಯುಸನ್ ಶ್ರೀಲಂಕಾ ವಿರುದ್ಧ ಮಂಗಳವಾರ ಕೊನೆಗೊಂಡ ಸ್ವದೇಶಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ 31ನೇ ಸ್ಥಾನ ಹಂಚಿಕೊಂಡಿದ್ದಾರೆ. ಸರಣಿಯಲ್ಲಿ 8 ವಿಕೆಟ್ ಪಡೆದಿರುವ ಸೋಧಿ 26 ಸ್ಥಾನ ಭಡ್ತಿ ಪಡೆದರೆ, 7 ವಿಕೆಟ್ ಪಡೆದಿರುವ ಫರ್ಗ್ಯುಸನ್ 12 ಸ್ಥಾನ ಭಡ್ತಿ ಪಡೆದರು. ರಾಸ್ ಟೇಲರ್ ಹಾಗೂ ಮಾರ್ಟಿನ್ ಗಪ್ಟಿಲ್ ಲಂಕಾ ವಿರುದ್ಧ ಕ್ರಮವಾಗಿ 281 ಹಾಗೂ 153 ರನ್ ಗಳಿಸಿದ ಕಾರಣ 3ನೇ ಹಾಗೂ 14ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ 11ನೇ ಸ್ಥಾನಕ್ಕೆ ಜಾರಿದ್ದಾರೆ.
ಟೀಮ್ ರ್ಯಾಂಕಿಂಗ್‌ನಲ್ಲಿ ನ್ಯೂಝಿಲೆಂಡ್ 3ನೇ ಸ್ಥಾನ ಉಳಿಸಿಕೊಂಡಿದೆ. ಒಂದು ಅಂಕ ಗಳಿಸಿ ಒಟ್ಟು 113 ಪಾಯಿಂಟ್ ಪಡೆದಿದೆ. ಶ್ರೀಲಂಕಾ 8ನೇ ಸ್ಥಾನ ಉಳಿಸಿಕೊಂಡಿದ್ದರೂ ಒಂದು ಅಂಕ ಕಳೆದುಕೊಂಡು 78 ಅಂಕಕ್ಕೆ ಕುಸಿದಿದೆ.
ಮೇ 30 ರಿಂದ ಜು.14ರ ತನಕ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಎಲ್ಲ ತಂಡಗಳು ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಲು ಎದುರು ನೋಡುತ್ತಿವೆ.