ಡೋಪಿಂಗ್-ವಿರೋಧಿ ಜಾಗೃತಿಗೆ ಇಂಡಿಯಾ ಯೂತ್ ಗೇಮ್ಸ್ ಬಳಕೆ
ಪುಣೆ, ಜ.9: ಬುಧವಾರದಿಂದ ಆರಂಭವಾಗಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್ ಕ್ರೀಡಾಕೂಟವನ್ನು ಡೋಪಿಂಗ್ ವಿರೋಧಿ ಜಾಗೃತಿಯ ವೇದಿಕೆಯಾಗಿ ಬಳಸಿಕೊಳ್ಳಲು ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ(ನಾಡಾ) ನಿರ್ಧರಿಸಿದೆ. ಈ ಕ್ರೀಡಾಕೂಟದಲ್ಲಿ ದೇಶಾದ್ಯಂತ ಸುಮಾರು 6,000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಈ ಕುರಿತು ಬುಧವಾರ ನಾಡಾ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವೊಂದರಲ್ಲಿ ನಾಡಾದ ಮಹಾನಿರ್ದೇಶಕ ನವೀನ್ ಅಗರ್ವಾಲ್ ತಿಳಿಸಿದ್ದಾರೆ.
‘‘ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳು ದೇಶದ ಯುವ ಪ್ರತಿಭೆಯ ಹೂರಣವಾಗಿದ್ದು, ಇವರಲ್ಲಿ ಕೆಲವರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ದೇಶವನ್ನು ಪ್ರತಿನಿಧಿಸಲಿದ್ದಾರೆ’’ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ಕಳೆದ ವರ್ಷ ದಿಲ್ಲಿಯಲ್ಲಿ ನಡೆದ ಖೇಲೊ ಇಂಡಿಯಾ ಶಾಲಾ ಕ್ರೀಡಾಕೂಟದಲ್ಲಿ 12 ಅಥ್ಲೀಟ್‌ಗಳ ಡೋಪಿಂಗ್ ಟೆಸ್ಟ್‌ನಲ್ಲಿ ಧನಾತ್ಮಕ ಫಲಿತಾಂಶ ಕಂಡುಬಂದಿತ್ತು. ಹಾಗಾಗಿ ನಾವು ಇಲ್ಲಿ ಪ್ರತಿಯೊಬ್ಬ ಕ್ರೀಡಾಪಟುವನ್ನೂ ತಲುಪುವ ಅಗತ್ಯವಿದೆ’’ ಎಂದರು.
ಕಳೆದ ಎರಡು ದಿನಗಳಲ್ಲಿ 700ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಡೋಪಿಂಗ್ ವಿರೋಧಿ ಜಾಗೃತಿಯ ಭಾಗವಾಗಿದ್ದಾರೆ. ನಾಡಾ ಈಗಾಗಲೇ ವೇಟ್‌ಲಿಫ್ಟಿಂಗ್, ಜುಡೊ ಹಾಗೂ ಕುಸ್ತಿ ವಿಭಾಗಗಳ 19 ಕ್ರೀಡಾಪಟುಗಳಿಂದ ಡೋಪಿಂಗ್ ಮಾದರಿಯನ್ನು ಸಂಗ್ರಹಿಸಿದೆ.