12 ರಂದು ದಿ.ಶ್ರೀನಿವಾಸ ಮಲ್ಯ ಪ್ರಶಸ್ತಿ ಪ್ರದಾನ: ಜೀವನ ಸಾಧನೆ ಪ್ರಶಸ್ತಿಗೆ ಡಾ.ಬಿ.ಎಂ. ಹೆಗ್ಡೆ ಆಯ್ಕೆ

Update: 2019-01-10 12:48 GMT
ಡಾ.ಬಿ.ಎಂ.ಹೆಗ್ಡೆ

ಮಂಗಳೂರು, ಜ.10: ಮಹಾನಗರ ಪಾಲಿಕೆ ವತಿಯಿಂದ ನೀಡಲಾಗುವ 2018ನೆ ಸಾಲಿನ ದಿವಂಗತ ಉಳ್ಳಾಲ ಶ್ರೀನಿವಾಸ ಮಲ್ಯ ಸ್ಮಾರಕ ಜೀವನ ಸಾಧನೆ ಪ್ರಶಸ್ತಿಗೆ ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ಬಿ.ಎಂ. ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಜ.12ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಮೇಯರ್ ಭಾಸ್ಕರ ಕೆ., ಅಂದು 2 ಗಂಟೆಗೆ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಪ್ರಶಸ್ತಿಯು 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಇದೇ ವೇಳೆ ಸಮಾಜ ಸೇವೆ ಕ್ಷೇತ್ರದಲ್ಲಿ ರಾಮಕೃಷ್ಣ ಆಶ್ರಮ, ಪತ್ರಿಕೋದ್ಯಮದಲ್ಲಿ ಮನೋಹರ್ ಪ್ರಸಾದ್, ಸಮುದಾಯ ಶಿಕ್ಷಣ ಮತ್ತು ಸೇವೆಯಲ್ಲಿ ಡಾ. ಹನಿಬಾಲ್ ಆರ್. ಕಬ್ರಾಲ್, ಸಾಹಿತ್ಯ ಕ್ಷೇತ್ರದಲ್ಲಿ ಸಾರಾ ಅಬೂಬಕರ್‌ಗೆ ವಿವಿಧ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ತಲಾ 50,000 ರೂ. ನಗದನ್ನು ಒಳಗೊಂಡಿರುತ್ತದೆ. ಕೇಂದ್ರದ ಮಾಜಿ ಸಚಿವ ಹಾಗೂ ಸಂಸದರಾದ ಡಾ.ಎಂ. ವೀರಪ್ಪ ಮೊಯ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವರು. ಸಮಾರಂಭವನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಬಿ.ಎಂ. ಫಾರೂಕ್, ಎಸ್.ಎಲ್. ಭೋಜೇಗೌಡ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ತಮ್ಮ ಅಧ್ಯಕ್ಷತೆಯಲ್ಲಿ ನಿವೃತ್ತ ಪ್ರಾಂಶುಪಾಲ ಎನ್. ಇಸ್ಮಾಯಿಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಚಂದ್ರಕಲಾ ನಂದಾವರ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಉದಯ ಕುಮಾರ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಸಾಧಕರನ್ನು ಆಯ್ಕೆ ಮಾಡಿದೆ ಎಂದು ಮೇಯರ್ ಭಾಸ್ಕರ ಕೆ. ತಿಳಿಸಿದರು.

ಗೋಷ್ಠಿಯಲ್ಲಿ ಉಪ ಮೇಯರ್ ಮುಹಮ್ಮದ್ ಕೆ., ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಡಿಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News