ಕಾರ್ಕಳದ ಹಿರ್ಗಾನದಲ್ಲಿ ಮತ್ತೊಂದು ಮಂಗನ ಶವ ಪತ್ತೆ: ಸ್ಥಳೀಯರಲ್ಲಿ ಆತಂಕ

Update: 2019-01-10 15:36 GMT
ಸಾಂದರ್ಭಿಕ ಚಿತ್ರ

ಉಡುಪಿ, ಜ.10: ಕಾರ್ಕಳ ತಾಲೂಕಿನ ಹಿರ್ಗಾನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ಇನ್ನೊಂದು ಮಂಗನ ಶವ ಪತ್ತೆಯಾಗುವುದರೊಂದಿಗೆ ಈವರೆಗೆ ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ಒಟ್ಟು ಎಂಟು ಮಂಗಗಳ ಶವ ಪತ್ತೆಯಾದಂತಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಹೊಸಂಗಡಿ (2), ಶಿರೂರು (2), ಸಿದ್ಧಾಪುರ (2), ಹಳ್ಳಿಹೊಳೆ (1) ಹಾಗೂ ಹಿರ್ಗಾನ (1)ಗಳಲ್ಲಿ ಸತ್ತ ಮಂಗಗಳ ಶವ ಪತ್ತೆಯಾಗಿವೆ. ಇವುಗಳಲ್ಲಿ ಶಿರೂರಿನ ಒಂದು ಮಂಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಅದೇ ರೀತಿ ಎರಡು ಮಂಗಗಳು ತುಂಬಾ ಸಮಯದ ಹಿಂದೆಯೇ ಸತ್ತಿರುವುದರಿಂದ ಅವುಗಳ ಭಾಗಗಳನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಿಲ್ಲ. ಇಂದು ಪತ್ತೆಯಾದ ಹಿರ್ಗಾನದ ಮಂಗವೂ ಸೇರಿದಂತೆ ಈವರೆಗೆ ಸತ್ತ ಐದು ಮಂಗಗಳ ಪ್ರಮುಖ ಭಾಗಗಳನ್ನು ಪರೀಕ್ಷೆಗಾಗಿ ಶಿವಮೊಗ್ಗದ ವಿಡಿಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಾ.ರೋಹಿಣಿ ತಿಳಿಸಿದರು.

ಕುಂದಾಪುರ ತಾಲೂಕಿನಲ್ಲಿ ಇಂದು ಯಾವುದೇ ಸತ್ತ ಮಂಗ ಪತ್ತೆಯಾಗಿಲ್ಲ. ನಿನ್ನೆ ತಡವಾಗಿ ಪತ್ತೆಯಾದ ಎರಡು ಮಂಗಗಳ ಪೋಸ್ಟ್‌ಮಾರ್ಟಂನ್ನು ಇಂದು ನಡೆಸಿ ಅದರ ಭಾಗಗಳನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಪರಿಸರದಲ್ಲಿ ಮಂಗಗಳು ಸಾಯುತ್ತಿರುವುದರಿಂದ ಜನರು ಗಾಬರಿಯಾಗ ಬೇಕಾದ ಅಗತ್ಯವಿಲ್ಲ. ಮಂಗಗಳ ದೇಹದಲ್ಲಿ ಮಂಗನ ಕಾಯಿಲೆಯ (ಕೆಎಫ್‌ಡಿ) ವೈರಸ್ ಇರುವ ಬಗ್ಗೆ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಖಚಿತಗೊಳ್ಳಲಿದೆ. ಶಿವಮೊಗ್ಗದಿಂದ ಹೆಚ್ಚಿನ ಪರೀಕ್ಷೆಗಾಗಿ ಸ್ಯಾಂಪಲ್‌ಗಳನ್ನು ಪುಣೆಗೆ ಕಳುಹಿಸಬೇಕಾಗಿದ್ದು, ಅಲ್ಲಿಂದ ವರದಿ ಬರಲು ಇನ್ನೂ 4-5ದಿನಗಳು ಬೇಕಾಗುತ್ತವೆ ಎಂದು ಡಾ.ಉಡುಪ ತಿಳಿಸಿದರು.

ಈ ನಡುವೆ ಸಿದ್ಧಾಪುರ, ಶಿರೂರು, ಹೊಸಂಗಡಿ, ಹಳ್ಳಿಹೊಳೆ, ಹಿರ್ಗಾನ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಮೂಲಕ ಈ ಪ್ರದೇಶಗಳಲ್ಲಿ ಜನಜಾಗೃತಿ ಕೈಗೊಳ್ಳಲಾಗುತ್ತಿದೆ. ಜ್ವರ ಬಂದವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ. ಪರಿಸರದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಜ್ವರದ ಚಿಕಿತ್ಸೆಗೆ ಬರುವ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಪ್ರತಿದಿನ ನೀಡುವಂತೆ ಸೂಚಿಸಲಾಗಿದ್ದು, ಅವುಗಳ ಮೇಲೂ ನಿಗಾ ಹಿಸಲಾಗಿದೆ ಎಂದು ಡಾ.ಉಡುಪ ತಿಳಿಸಿದರು.

ಕುಂದಾಪುರ ತಾಲೂಕಿನ ಹೊಸಂಗಡಿಯಲ್ಲಿ ಸತ್ತ ಮಂಗಗಳು ಪತ್ತೆಯಾದ ಪರಿಸರದ 50 ಮೀ. ವ್ಯಾಪ್ತಿಯಲ್ಲಿ ಪತ್ತೆಯಾದ ಉಣ್ಣಿ(ಒಣಗು)ಗಳನ್ನು ಸಂಗ್ರಹಿಸಿ ಅದರಲ್ಲಿ ಕೆಎಫ್‌ಡಿ ವೈರಸ್‌ಗಳಿವೆಯೇ ಎಂಬ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಡಾ.ಉಡುಪ ತಿಳಿಸಿದರು. ಕೆಎಫ್‌ಡಿ ಕಾಯಿಲೆಯು ಸೋಂಕಿಗೊಳಗಾದ ಒಣಗಿ (ಪರಾವಲಂಬಿ ಜೀವಿಗಳು) ನಿಂದಲೇ ಹರಡುತ್ತದೆ. ಸೋಂಕಿಗೀಡಾದ ಒಣಗು ಕಾಡಿನಲ್ಲಿರುವ ಮಂಗಗಳಿಗೆ ಕಚ್ಚುವುದರಿಂದ ಕಾಯಿಲೆ ಮಂಗಗಳಿಗೆ ತಗಲುತ್ತದೆ. ಮಂಗನಿಂದ ಅದು ಮನುಷ್ಯರಿಗೆ ಹರಡುತ್ತದೆ ಎಂದರು.

ಕಾಯಿಲೆಯಿರುವ ಮಂಗ ಸತ್ತಾಗ, ಅರ್ಧಗಂಟೆಯಲ್ಲೇ ಅದರಲ್ಲಿರುವ ಎಲ್ಲಾ ಒಣಗು ಅಲ್ಲಿಂದ ಹೊರಬರುತ್ತದೆ. ಹೀಗಾಗಿ ಅಂಥ ಸಂದರ್ಭದಲ್ಲಿ ಯಾರೂ ಸೂಕ್ತ ರಕ್ಷಣೆ ಇಲ್ಲದೇ ಮಂಗನ ಶವ ಬಳಿ ತೆರಳಬಾರದು. ಮಂಗ ಸತ್ತಾಕ್ಷಣ ಅದನ್ನು ಮುಟ್ಟುವುದಾಗಲಿ, ಸುಡುವುದಾಗಲಿ ಮಾಡಬಾರದು. ಸತ್ತ 1-2 ಗಂಟೆಯ ಬಳಿಕವಷ್ಟೇ ಅದರ ಪೋಸ್ಟ್‌ಮಾರ್ಟಂ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಪರೀಕ್ಷೆಗಾಗಿ ಸತ್ತ ಮಂಗನ ಮೆದುಳು, ಕಿಡ್ನಿ, ಲೀವರ್, ಶ್ವಾಸಕೋಶ ಮುಂತಾದ ಪ್ರಮುಖ ಭಾಗಗಳನ್ನು ತೆಗೆದು ಶಿವಮೊಗ್ಗಕ್ಕೆ ಕಳುಹಿಸಲಾಗುತ್ತದೆ. ಉಳಿದ ದೇಹವನ್ನು ಅಲ್ಲೇ ಸುಡಲಾಗುತ್ತದೆ ಎಂದು ಡಾ.ಉಡುಪ ತಿಳಿಸಿದರು.

ಮಣಿಪಾಲ: 21 ಮಂದಿಯಲ್ಲಿ ದೃಢ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆಸುಪಾಸಿನ ಸುಮಾರು 59 ಮಂದಿ ಶಂಕಿತ ಮಂಗನಕಾಯಿಲೆ ರೋಗಿಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಇವರಲ್ಲಿ 21 ಮಂದಿಯಲ್ಲಿ ರೋಗ ದೃಢಪಟ್ಟಿದೆ. 59 ಮಂದಿಯಲ್ಲಿ 33 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದು, 26 ಮಂದಿ ಇನ್ನೂ ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಕೆಎಂಸಿ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News