ಉಡುಪಿ: ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Update: 2019-01-10 15:39 GMT

ಉಡುಪಿ,ಜ.10: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ನ ವತಿಯಿಂದ ಉಡುಪಿಯ ಸಾಧಕರುಗಳನ್ನು ಗೌರವಿಸುವ ‘ಅಭಿನಂದನಾ ಸಂಭ್ರಮ’ ಕಾರ್ಯಕ್ರಮ ಹೊಟೇಲ್ ಸ್ವದೇಶ್ ಹೆರಿಟೇಜ್ ಸಭಾಂಗಣದಲ್ಲಿ ಬುಧವಾರ ಜರಗಿತು.

ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಶ್ರೇಷ್ಠ ಸಹಕಾರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಬಡಗುಬೆಟ್ಟು ಕೊ ಅಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ್ ಶೆಟ್ಟಿ ಇಂದ್ರಾಳಿ, ಸಮಾಜಸೇವಾ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಮನೋಹರ್ ಶೆಟ್ಟಿ, ಸಮಾಜ ಸೇವಕ ತಾರಾನಾಥ್ ಮೇಸ್ತ ಶಿರೂರು ಮತ್ತು ಮುಳುಗುತಜ್ಞ ಅರುಣ್ ಕುಮಾರ್ ದೆಂದುರುಕಟ್ಟೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಧಕರುಗಳನ್ನು ತುಳುನಾಡಿನ ಕೃಷಿಯ ಪ್ರತೀಕವಾದ (ಭತ್ತ ಸಂಗ್ರಹ ಕಣಜ) ತಿರಿ ಮಾದರಿಯ ಪೇಟದ ಕಲಾಕೃತಿಯನ್ನು ಸಾಧಕರುಗಳ ತಲೆಗೆ ತೋಡಿಸಿದ್ದು ನೆರೆದ ಸಭಿಕರ ಗಮನ ಸೆಳೆಯಿತು. ಅಳಿವಿನಂಚಿನಲ್ಲಿರುವ ಕರಾವಳಿಯ ಕೃಷಿ ಪದ್ಧತಿಯ ಸಂಪ್ರದಾಯದ ಪರಿಚಯ ವೇದಿಕೆಯಲ್ಲಿ ಅನಾವರಣಗೊಂಡಿತು.

ಸನ್ಮಾನಿತರ ಪರವಾಗಿ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಮನೋಹರ್ ಶೆಟ್ಟಿ ಮಾತನಾಡಿ, ನಾಗರಿಕ ಸಮಿತಿ ಯಾವುದೇ ಫಲಾಪೇಕ್ಷೆ ಇಲ್ಲದೆ ನಡೆಸುತ್ತಿರುವ ನಿರಂತರ ಸಮಾಜ ಸೇವೆಯನ್ನು ಪ್ರಶಂಸಿಸಿದರು.

ಮುಖ್ಯ ಅತಿಥಿಗಳಾಗಿ ಮದರ್ ಆಫ್ ಸಾರೋಸ್ ಚರ್ಚ್‌ನ ಧರ್ಮಗುರು ವಂ. ವಲೇರಿನ್ ಮೆಂಡೋನ್ಸಾ ಆರ್ಶೀವಚನ ನೀಡಿದರು. ಸದ್ಭಾವನಾ ಸಮಿತಿ ಕಾರ್ಯದರ್ಶಿ ಅಕ್ಬರ್ ಆಲಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಭೋಜರಾಜ್ ಆರ್ ಕಿದಿಯೂರ್, ನಿತ್ಯಾನಂದ ಮಂದಿರ ಮಠದ ಪದಾಧಿಕಾರಿ ಯೊೀಗೇಶ್ ಶಾನಭಾಗ್ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಗೌರವ ಅಧ್ಯಕ್ಷ ಎಂ ಶ್ರೀನಾಗೇಶ್ ಹೆಗ್ಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತೆ ಪಲ್ಲವಿ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಸಂತೋಷ್ ಸರಳಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News