×
Ad

ನೂತನ ಶಿಕ್ಷಣ ಕಾಯ್ದೆಯನ್ವಯ 8ನೇ ತರಗತಿವರೆಗೆ ಹಿಂದಿ ಭಾಷೆ ಕಡ್ಡಾಯ ?

Update: 2019-01-10 22:31 IST

ಹೊಸದಿಲ್ಲಿ, ಜ. 10: ಕೆ. ಕಸ್ತೂರಿ ರಂಗನ್ ಸಮಿತಿ ಸಿದ್ಧಪಡಿಸಿದ ನೂತನ ಶಿಕ್ಷಣ ನೀತಿಯ ಕರಡು ವರದಿಯಲ್ಲಿ ತ್ರಿಭಾಷಾ ಸೂತ್ರದ ಅನ್ವಯ ದೇಶಾದ್ಯಂತ ಹಿಂದಿ ಭಾಷೆಯನ್ನು 8ನೇ ತರಗತಿ ವರಗೆ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಪಶ್ಚಿಮಬಂಗಾಳ ಹಾಗೂ ಅಸ್ಸಾಂನಂತಹ ಹಿಂದಿಯೇತರ ರಾಜ್ಯಗಳ ಹಲವು ಶಾಲೆಗಳಲ್ಲಿ ಹಿಂದಿ ಭಾಷೆ ಕಡ್ಡಾಯಗೊಳಿಸಿಲ್ಲ. ಗಣಿತ ಹಾಗೂ ವಿಜ್ಞಾನಕ್ಕೆ ಏಕರೂಪದ ಪಠ್ಯಕ್ರಮ ಜಾರಿ, ಬುಡಕಟ್ಟು ಭಾಷೆಗಳಿಗೆ ದೇವನಾಗರಿ ಲಿಪಿ ಅಭಿವೃದ್ಧಿ ಹಾಗೂ ಕೌಶಲ ಆಧರಿತ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಮೊದಲಾದ ಶಿಫಾರಸನ್ನು ಈ ನೂತನ ಶಿಕ್ಷಣ ನೀತಿ ಹೊಂದಿದೆ.

 ‘ಭಾರತ ಕೇಂದ್ರಿತ’ ಹಾಗೂ ‘ವೈಜ್ಞಾನಿಕ’ ಕಲಿಕೆ ಅನುಷ್ಠಾನಗೊಳಿಸುವ ಉದ್ದೇಶ ನೂತನ ಶಿಕ್ಷಣ ನೀತಿಯಲ್ಲಿದೆ. 5ನೇ ತರಗತಿ ವರೆಗೆ ಅವಧಿ, ಭೋಜ್‌ಪುರಿ, ಮೈಥಿಲಿ ಮೊದಲಾದ ಸ್ಥಳೀಯ ಭಾಷೆಯಲ್ಲಿ ಪಠ್ಯಕ್ರಮ ರೂಪಿಸುವಂತೆ ನೂತನ ಶಿಕ್ಷಣ ನೀತಿ ಶಿಫಾರಸು ಮಾಡಿದೆ. 9 ಸದಸ್ಯರನ್ನು ಒಳಗೊಂಡ ಕಸ್ತೂರಿ ರಂಗನ್ ಸಮಿತಿ 2018 ಡಿಸೆಂಬರ್ 31ರ ಮೊದಲು ನೂತನ ಶಿಕ್ಷಣ ನೀತಿಯ ವರದಿಯನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಹಸ್ತಾಂತರಿಸಿದೆ. ‘‘ನಾವು ವರದಿಯನ್ನು ಔಪಚಾರಿಕವಾಗಿ ಒಪ್ಪಿಸಲು ಮಾನವ ಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಿದ್ದೇವೆ’’ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ ಎಂದು ಪತ್ರಿಕೆಯೊಂದ್ದು ವರದಿ ಮಾಡಿದೆ.

ಪ್ರಧಾನ ಮಂತ್ರಿ ಅವರ ನೇತೃತ್ವದಲ್ಲಿ ಶಾಶ್ವತ ಶಿಕ್ಷಣ ಸಮಿತಿ, ಶಿಕ್ಷಣ ಸಶಕ್ತಗೊಳಿಸಲು ನಿಯಂತ್ರಕ ವ್ಯವಸ್ಥೆ ಹಾಗೂ ಸರಕಾರದ ಹೊರಗಿರುವವರು ಇದರ ನೇತೃತ್ವ ವಹಿಸುವುದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಪ್ರಚಾರ ಮಾಡುವುದು ಮೊದಲಾದ ಶಿಫಾರಸುಗಳನ್ನು ಕೂಡ ಈ ನೂನತ ಶಿಕ್ಷಣ ನೀತಿ ಹೊಂದಿದೆ ಎಂದು ಹೇಳಲಾಗುತ್ತಿದೆ.

ಹಿಂದಿ ಭಾಷೆ ಕಡ್ಡಾಯ ಚಿಂತನೆ ಇಲ್ಲ: ಪ್ರಕಾಶ್ ಜಾವ್ಡೇಕರ್

ಹಿಂದಿ ಭಾಷೆ ಕಡ್ಡಾಯಗೊಳಿಸುವ ಉದ್ದೇಶವನ್ನು ಸರಕಾರ ಹೊಂದಿದೆ ಎಂಬ ಮಾಧ್ಯಮ ವರದಿಯನ್ನು ನಿರಾಕರಿಸಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್, ನೂತನ ಶಿಕ್ಷಣ ನೀತಿಯಲ್ಲಿ ಯಾವುದೇ ಭಾಷೆಗೆ ಕಡ್ಡಾಯ ಸ್ಥಾನ ನೀಡುವುದಿಲ್ಲ ಎಂದಿದ್ದಾರೆ. ‘‘ನೂತನ ಶಿಕ್ಷಣ ನೀತಿಯ ಕುರಿತ ಸಮಿತಿ ತನ್ನ ವರದಿಯಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿಲ್ಲ. ಮಾದ್ಯಮದ ಒಂದು ವಿಭಾಗದ ದಾರಿತಪ್ಪಿಸುವ ವರದಿಯ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಅಗತ್ಯವಾಗಿತ್ತು’’ ಎಂದು ಜಾವ್ಡೇಕರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News