×
Ad

ಹೆರಿಗೆ ಸಂದರ್ಭ ಶಿಶುವಿನ ತಲೆ ತುಂಡು !

Update: 2019-01-10 23:01 IST

ಜೈಪುರ, ಜ. 10: ಹೆರಿಗೆ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ನರ್ಸ್ ಮಗುವನ್ನು ಎಳೆಯುವಾಗ ತಲೆ ತುಂಡಾಗಿ ದೇಹದ ಒಂದು ಭಾಗ ಗರ್ಭಕೋಶದಲ್ಲೇ ಉಳಿದ ಘಟನೆ ರಾಜಸ್ಥಾನದ ಆಸ್ಪತ್ರೆಯೊಂದರಲ್ಲಿ ಸಂಭವಿಸಿದೆ.

ಅನಂತರ ಮಗುವಿನ ಉಳಿದ ಭಾಗದೊಂದಿಗೆ ಮಹಿಳೆಯನ್ನು ವಿವಿಧ ಆಸ್ಪತ್ರೆಗೆ ಕಳುಹಿಸಲಾಗಿದೆ. ಶಸ್ತ್ರಚಿಕಿತ್ಸೆಯ ವಿಫಲತೆ ಹಾಗೂ ಹೊರಗೆಳೆಯುವಾಗ ಮಗುವಿನ ದೇಹದ ಭಾಗ ಬಾಕಿ ಆಗಿರುವ ಬಗ್ಗೆ ಜೈಸಲ್ಮಾರ್‌ನ ರಾಮಗಢದಲ್ಲಿರುವ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ನಮಗೆ ತಿಳಿಸಿಲ್ಲ ಎಂದು ತಿಲೋಕ್ ಭಕ್ತಿ ಆರೋಪಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮದ್ಯಪಾನ ಮಾಡಿದ್ದರು ಹಾಗೂ ಅವರು ನನ್ನೊಂದಿಗೆ ದುರ್ವರ್ತನೆ ತೋರಿದ್ದರು. ರಾಮಗಢ ಆಸ್ಪತ್ರೆಯ ವೈದ್ಯರು ‘‘ಶಸ್ತ್ರಚಿಕಿತ್ಸೆ ಬಳಿಕ ಹೆರಿಗೆ ಪೂರ್ಣಗೊಂಡಿದೆ. ಕೇವಲ ಮಾಸು ಮಾತ್ರ ಗರ್ಭಾಶಯದಲ್ಲಿ ಇದೆ’’ ಎಂದು ಹೇಳಿದ್ದರು. ಇದರ ಬಗ್ಗೆ ಅನುಮಾನ ಹೊಂದಿ ಆಕೆಯನ್ನು ಜೋಧಪುರದ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ಅವರು ತಿಳಿಸಿದ್ದಾರೆ.

ಮಹಿಳೆಗೆ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ನಡೆದ ವಿಫಲತೆ ಬಗ್ಗೆ ಜೋಧ್‌ಪುರದ ಉಮೈದ್ ಆಸ್ಪತ್ರೆಯ ವೈದ್ಯರಿಗೆ ತಿಳಿಯಿತು. ಅವರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದರು. ಅನಂತರ ಕುಟುಂಬ ರಾಮಗಢ ಆಸ್ಪತ್ರೆಯ ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿತು. ಆಸ್ಪತ್ರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಪೊಲೀಸರು ದೇಹದ ಒಂದು ಭಾಗವನ್ನು ಪತ್ತೆ ಮಾಡಿದರು ಎಂದು ಸಬ್ ಇನ್ಸ್‌ಪೆಕ್ಟರ್ ಜಲಮ್ ಸಿಂಗ್ ಹೇಳಿದ್ದಾರೆ.

‘‘ರಾಮಗಢ ಆಸ್ಪತ್ರೆಯ ಇಬ್ಬರು ಸಿಬ್ಬಂದಿ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೇವೆ ಹಾಗೂ ಅವರ ವಿಚಾರಣೆ ನಡೆಸುತ್ತಿದ್ದೇವೆ.’’ ಎಂದು ಅವರು ಹೇಳಿದ್ದಾರೆ. ಘಟನೆ ನಡೆಯುವಾಗ ನಾನು ಆ ಪ್ರದೇಶದಲ್ಲಿ ಇರಲಿಲ್ಲ. ನನಗೆ ಮಾಹಿತಿ ನೀಡುವ ಬದಲು, ವೈದ್ಯಕೀಯ ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ ಬಳಿಕ ಈ ಘಟನೆ ನನ್ನ ಗಮನಕ್ಕೆ ಬಂತು ಎಂದು ರಾಮಗಢ ಸಮುದಾಯ ಆರೋಗ್ಯ ಕೇಂದ್ರದ ಡಾ. ನಿಖಿಲ್ ಶರ್ಮಾ ಹೇಳಿದ್ದಾರೆ.

ಸಿಬ್ಬಂದಿ ದೇಹದ ಭಾಗವನ್ನು ಶವಾಗಾರದಲ್ಲಿ ಇರಿಸಿದ್ದರು ಹಾಗೂ ತಾವು ಅವರ ಕುಟುಂಬಕ್ಕೆ ಮಾಹಿತಿ ನೀಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆ ಬಳಿಕ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸಲಿದೆ ಎಂದು ಜೈಸಲ್ಮಾರ್‌ನ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿ ಡಾ. ಬಿ.ಎಲ್. ಬಂಕುರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News