ಚಾಂಪಿಯನ್ ಫೆಡರರ್‌ಗೆ ಡೆನಿಸ್ ಇಸ್ಟೊಮಿನ್ ಮೊದಲ ಎದುರಾಳಿ
ಮೆಲ್ಬೋರ್ನ್, ಜ.10: ಎರಡು ಬಾರಿಯ ಹಾಲಿ ಚಾಂಪಿಯನ್ ರೋಜರ್ ಫೆಡರರ್ ಮುಂದಿನ ವಾರ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಉಝ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್‌ರನ್ನು ಎದುರಿಸುವ ಮೂಲಕ ಹ್ಯಾಟ್ರಿಕ್ ಪ್ರಶಸ್ತಿಗಾಗಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಡ್ರಾ ಪ್ರಕ್ರಿಯೆ ಗುರುವಾರ ನಡೆದಿದೆ. ಸೋಮವಾರ ಆರಂಭವಾಗಲಿರುವ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಆಟಗಾರರು ಆರಂಭದಲ್ಲೇ ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ.
ಆರು ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಫೆಡರರ್ ಕಳೆದ ವರ್ಷದ ಫೈನಲ್‌ನಲ್ಲಿ ಮರಿನ್ ಸಿಲಿಕ್‌ರನ್ನು ಮಣಿಸಿದ್ದರು. ಈ ವರ್ಷ ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊಯೇಶಿಯದ ಸಿಲಿಕ್‌ರನ್ನು ಮತ್ತೊಮ್ಮೆ ಎದುರಿಸುವ ಸಾಧ್ಯತೆಯಿದೆ.
ಅಗ್ರ ಶ್ರೇಯಾಂಕದ ಜೊಕೊವಿಕ್ ಮೆಲ್ಬೋರ್ನ್‌ನಲ್ಲಿ ಏಳನೇ ಪ್ರಶಸ್ತಿ ನಿರೀಕ್ಷೆಯಲ್ಲಿದ್ದು, ವಿಂಬಲ್ಡನ್ ಹಾಗೂ ಯುಎಸ್ ಓಪನ್ ಬಳಿಕ ಸತತ ಮೂರನೇ ಗ್ರಾನ್‌ಸ್ಲಾಮ್ ಕಿರೀಟ ತೊಡಲು ಕಾತುರರಾಗಿದ್ದಾರೆ.
ಸರ್ಬಿಯದ ಜೊಕೊವಿಕ್ ಎರಡನೇ ಸುತ್ತಿನಲ್ಲಿ ಫ್ರಾನ್ಸ್‌ನ ಜೊ-ವಿಲ್ಫ್ರೆಡ್ ಸೊಂಗ ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕಿ ನಿಶಿಕೊರಿ ಅವರನ್ನು ಎದುರಿಸುವ ಸಾಧ್ಯತೆಯಿದೆ.
ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಿಂದ ಹೊರ ನಡೆದಿರುವ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಎರಡನೇ ಶ್ರೇಯಾಂಕದ ರಫೆಲ್ ನಡಾಲ್ ಮೊದಲ ಸುತ್ತಿನಲ್ಲಿ ಶ್ರೇಯಾಂಕರಹಿತ ಆಟಗಾರ ಜೇಮ್ಸ್ ಡಕ್‌ವರ್ತ್‌ರನ್ನು ಮುಖಾಮುಖಿಯಾಗಲಿದ್ದಾರೆ.
ಕಳೆದ ವರ್ಷ ಸೆಮಿ ಫೈನಲ್‌ಗೆ ತಲುಪಿದ್ದ ಕೈಲ್ ಎಡ್ಮಂಡ್ ಸ್ಪೇನ್‌ನ ನಡಾಲ್‌ಗೆ 4ನೇ ಸುತ್ತಿಲ್ಲಿ ಎದುರಾಳಿಯಾಗುವ ಸಾಧ್ಯತೆಯಿದೆ.