ಚಾನ್‌ಥಿಪ್ ಗೋಲು: ಥಾಯ್ಲೆಂಡ್‌ಗೆ ಜಯ

Update: 2019-01-10 18:15 GMT

ದುಬೈ, ಜ.10:ತನ್ನ ಅಭಿಮಾನಿಗಳಿಂದ ‘‘ಮೆಸ್ಸಿ ಜಾಯ್’’ ಎಂದು ಕರೆಸಿಕೊಳ್ಳುವ ಚಾನ್‌ಥಿಪ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಗುರುವಾರ ಥಾಯ್ಲೆಂಡ್ ತಂಡ ಏಶ್ಯಕಪ್ ಫುಟ್ಬಾಲ್ ಪಂದ್ಯದಲ್ಲಿ ಬಹರೈನ್ ತಂಡವನ್ನು 1-0 ಗೋಲಿನಿಂದ ಸೋಲಿಸಿದೆ. ತಮ್ಮ ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ 1-4 ಗೋಲುಗಳ ಅಂತರದಿಂದ ಮಣಿದ ನಂತರ ಥಾಯ್ಲೆಂಡ್ ಕೋಚ್ ರಾಜೆವಾಕ್ ವಜಾ ಆಗಿದ್ದರು. ಆದ್ದರಿಂದ ಈ ಗೆಲುವು ಥಾಯ್ಲೆಂಡ್ ತಂಡಕ್ಕೆ ಹೊಸ ಉತ್ಸಾಹ ತಂದಿದೆ. ಒಟ್ಟು ಏಶ್ಯಕಪ್ ಟೂರ್ನಿಯಲ್ಲಿ ಆ ತಂಡ ಗಳಿಸಿದ ಎರಡನೇ ಗೆಲುವು ಇದಾಗಿದೆ. ಈ ಗೆಲುವಿನ ಮೂಲಕ ಥಾಯ್ಲೆಂಡ್ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದೆ. ಭಾರತ ಮೊದಲ ಸ್ಥಾನದಲ್ಲಿದೆ.

ಪಂದ್ಯದ ಪ್ರಥಮಾರ್ಧದಲ್ಲಿ ಥಾಯ್ಲೆಂಡ್ ಯಾವುದೇ ಸಮೀಪದ ದಾಳಿ ನಡೆಸಿರಲಿಲ್ಲ. ಆದರೆ ಬಹರೈನ್‌ನ ಮುಹಮ್ಮದ್ ಜಾಸಿಮ್ ಮರ್ಹೂನ್ ಹಾಗೂ ಸಯ್ಯದ್ ಧಿಯಾ ಸಯೀದ್ ತಲಾ ಒಂದು ಬಾರಿ ಥಾಯ್ಲೆಂಡ್ ಗೋಲುಪೆಟ್ಟಿಗೆಗೆ ದಾಳಿ ನಡೆಸಿದ್ದರು. ಎರಡೂ ಬಾರಿ ಅತ್ಯುತ್ತಮ ಪ್ರದರ್ಶನದ ಮೂಲಕ ಥಾಯ್ ಗೋಲ್‌ಕೀಪರ್ ಚಾಟ್‌ಚಾಯಿ ಗೋಲಾಗುವುದನ್ನು ತಡೆದಿದ್ದರು.

ಆದರೆ 60ನೇ ನಿಮಿಷದಲ್ಲಿ ಥಾಯ್ಲೆಂಡ್‌ನಲ್ಲಿ ಮೆಸ್ಸಿ ಎಂದು ಕರೆಸಿಕೊಳ್ಳುವ ಚಾನ್‌ಥಿಪ್ ಬಹರೈನ್ ಗೋಲ್‌ಕೀಪರ್ ಸಯ್ಯದ್ ಶುಬ್ಬರ್ ಅಲಾವಿ ಅವರನ್ನು ವಂಚಿಸಿ ಗೋಲು ಬಾರಿಸುವಲ್ಲಿ ಸಫಲರಾದರು. ಥಾಯ್ಲೆಂಡ್ 2007ರ ಏಶ್ಯಕಪ್ ಟೂರ್ನಿಯಲ್ಲಿ ಮೊದಲ ಜಯವನ್ನು ಕಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News