ಪತ್ರಕರ್ತನ ಕೊಲೆ ಪ್ರಕರಣ: ಗುರ್ಮೀತ್ ಸಿಂಗ್ ಸೇರಿ ಮೂವರು ದೋಷಿಗಳು

Update: 2019-01-11 15:34 GMT

ಹೊಸದಿಲ್ಲಿ,ಜ.11: ತನ್ನಿಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ 20 ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುತ್ತಿರುವ ಸ್ವಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಮತ್ತು ಇತರ ಮೂವರನ್ನು ಪತ್ರಕರ್ತ ರಾಮಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಎಂದು ಹರ್ಯಾಣದ ಪಂಚಕುಲಾದ ವಿಶೇಷ ನ್ಯಾಯಾಲಯವು ಶುಕ್ರವಾರ ಘೋಷಿಸಿದೆ.

ಕುಲದೀಪ ಸಿಂಗ್,ನಿರ್ಮಲ್ ಸಿಂಗ್ ಮತ್ತು ಕೃಷ್ಣ ಲಾಲ್ ಇತರ ಅಪರಾಧಿಗಳಾಗಿದ್ದು,ವಿಶೇಷ ನ್ಯಾಯಾಧೀಶ ಜಗದೀಪ ಸಿಂಗ್ ಅವರು ಜ.17ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.

2002ರಲ್ಲಿ ಛತ್ರಪತಿ ಅವರ ಹತ್ಯೆ ನಡೆದಿತ್ತು.

ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿರುವ ಗುರ್ಮೀತ್(51)ನನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಗುರ್ಮೀತ್ ಈಗಾಗಲೇ 20 ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. 2017,ಆಗಸ್ಟ್‌ನಲ್ಲಿ ಆತ ದೋಷಿಯೆಂದು ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಆತನ ಅನುಯಾಯಿಗಳು ಪಂಚಕುಲಾದಲ್ಲಿ ದಂಗೆಯೆದ್ದಿದ್ದು,30 ಜನರು ಮೃತಪಟ್ಟಿದ್ದರು ಮತ್ತು ಕೋಟ್ಯಂತರ ರೂ.ಗಳ ಆಸ್ತಿಪಾಸ್ತಿ ನಷ್ಟವುಂಟಾಗಿತ್ತು.

ಗುರ್ಮೀತ್ ಸಿರ್ಸಾದಲ್ಲಿನ ಡೇರಾ ಮುಖ್ಯಕಚೇರಿಯಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದಾನೆ ಎಂದು ಆರೋಪಿಸಿದ್ದ ಅನಾಮಧೇಯ ಪತ್ರವೊಂದನ್ನು ಛತ್ರಪತಿ ತನ್ನ ‘ಪೂರಾ ಸಚ್’ ವೃತ್ತಪತ್ರಿಕೆಯಲ್ಲಿ ಪ್ರಕಟಿಸಿದ ಬಳಿಕ 2002,ಅಕ್ಟೋಬರ್‌ನಲ್ಲಿ ಅವರ ನಿವಾಸದ ಹೊರಗೆ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

ಈ ಬಗ್ಗೆ 2003ರಲ್ಲಿ ಪ್ರಕರಣ ದಾಖಲಾಗಿದ್ದು,2006ರಲ್ಲಿ ಸಿಬಿಐಗೆ ಹಸ್ತಾಂತರಗೊಂಡಿತ್ತು. ಪ್ರಕರಣದಲ್ಲಿ ಗುರ್ಮೀತ್‌ನನ್ನು ಪ್ರಮುಖ ಸಂಚುಕೋರನನ್ನಾಗಿ ಹೆಸರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News