ಉಡುಪಿಯಲ್ಲಿ ಯಾವುದೇ ಶಂಕಿತ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ: ಡಾ.ಪ್ರಶಾಂತ್ ಭಟ್

Update: 2019-01-11 12:39 GMT
ಸಾಂದರ್ಭಿಕ ಚಿತ್ರ

ಉಡುಪಿ, ಜ.11: ಉಡುಪಿ ಜಿಲ್ಲೆಯಲ್ಲಿ ಯಾವುದೇ ಶಂಕಿತ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ. ಕಳೆದ ಮೂರು-ನಾಲ್ಕು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 11 ಮಂಗಗಳ ಶವ ಪತ್ತೆಯಾಗಿದ್ದು, ಇವುಗಳಲ್ಲಿ ಏಳು ಮಂಗಗಳ ಅಂಗಗಳನ್ನು ಪರೀಕ್ಷೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದರಲ್ಲಿ ಯಾವುದು ಕೂಡ ಈವರೆಗೆ ದೃಢೀಕರಣ ಆಗಿಲ್ಲ ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪತ್ರಕರ್ತರಿಗಾಗಿ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

ಕುಂದಾಪುರ ತಾಲೂಕಿನ ಸಿದ್ಧಾಪುರ- 2, ಹೊಸಂಗಡಿ- 3, ಹಳ್ಳಿಹೊಳೆ- 1, ಶಿರೂರು ಮೆಲ್ಪಂಕ್ತಿ- 2, ಕಂಡ್ಲೂರು- 1, ಬೆಳ್ವೆ-1, ಕಾರ್ಕಳ ತಾಲೂಕಿನ ಹಿರ್ಗಾನ- 1 ಮಂಗಗಳ ಶವಗಳು ಪತ್ತೆಯಾಗಿವೆ. ಇವುಗಳಲ್ಲಿ ನಾಲ್ಕು ಶವಗಳು ಕೊಳೆತ ಸ್ಥಿತಿಯಲ್ಲಿ ಹಾಗೂ ಬಹಳ ಹಿಂದೆ ಸತ್ತ ಕಾರಣದಿಂದ ಪರೀಕ್ಷೆಗೆ ಕಳುಹಿಸಿಕೊಟ್ಟಿಲ್ಲ ಎಂದರು.

ಈ ರೋಗ ಹರಡದಂತೆ ಹಚ್ಚುವ ಡಿಎಂಪಿ ಆಯಿಲ್‌ಗಳನ್ನು ಈಗಾಗಲೇ ಮಂಗಗಳು ಸತ್ತ ಬಗ್ಗೆ ವರದಿಯಾಗಿರುವ ಪ್ರದೇಶಗಳಿಗೆ ಸರಬರಾಜು ಮಾಡ ಲಾಗಿದೆ. ಅಲ್ಲದೆ ಈ ಕಾಯಿಲೆಗೆ ಸಂಬಂಧಿಸಿದ ಔಷಧಿಗಳನ್ನು ಈ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸದಾ ಲಭ್ಯವಿರುವಂತೆ ಇರಿಸಲಾಗಿದೆ. ರೋಗ ಹರಡುವ ಉಣ್ಣೆಗಳನ್ನು ನಾಶ ಪಡಿಸಲು ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮಾನಸಿಕ ತಜ್ಞ ಡಾ.ಮಾನಸ್ ಇ.ಆರ್. ಮಾತನಾಡಿ, ಆತ್ಮಹತ್ಯೆ ಯತ್ನ ಮಾಡುವುದು ಕಾನೂನು ಪ್ರಕರಣ ಅಪರಾಧ ಅಲ್ಲ ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದುದರಿಂದ ಈಗ ಆತ್ಮಹತ್ಯೆ ಯತ್ನಿಸಿದವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಅದರ ಬದಲು ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಮಾತನಾಡಿ, ಖಾಸಗಿ ಸಂಸ್ಥೆಗಳು ಕ್ಷಯ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಿದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 9500 ಎಚ್‌ಐವಿ ಪೀಡಿತರಿದ್ದು, 2017- 18ರಲ್ಲಿ 10 ಮಂದಿ ಗರ್ಭಿಣಿಯರು ಸೇರಿದಂತೆ 283 ಹಾಗೂ 2018- 19ರಲ್ಲಿ 3 ಗರ್ಭಿಣಿ ಸೇರಿದಂತೆ 230 ಎಚ್‌ಐವಿ ಪೀಡಿತರನ್ನು ಗುರುತಿಸಲಾಗಿದೆ ಎಂದರು.

ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಒಂದೇ ಒಂದು ಫೈಲೇರಿಯಾ ರೋಗಿ ಪತ್ತೆಯಾದ ಬಗ್ಗೆ ವರದಿ ಯಾಗಿಲ್ಲ. ಈಗಾಗಲೇ ಎರಡು ಸುತ್ತಿನ ಸರ್ವೆ ನಡೆಸಲಾಗಿದ್ದು, ಈ ವರ್ಷ ಮೂರನೆ ಸುತ್ತಿನ ಸರ್ವೆ ಕಾರ್ಯ ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ರೋಗಿ ಪತ್ತೆಯಾಗದಿದ್ದರೆ ಎರಡು ವರ್ಷಗಳ ನಂತರ ಜಿಲ್ಲೆಗೆ ಫೈಲೇರಿಯಾ ಮುಕ್ತ ಜಿಲ್ಲೆ ಎಂಬ ಪ್ರಮಾಣಪತ್ರ ದೊರೆಯಲಿದೆ ಎಂದು ಹೇಳಿದರು.

ಕಾರ್ಯಾಗಾರವನ್ನು ಉಡುಪಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು, ಜತೆ ಕಾರ್ಯದರ್ಶಿ ಮೈಕಲ್ ರೋಡಿಗ್ರಸ್ ಉಪಸ್ಥಿತರಿದ್ದರು.

ಮಕ್ಕಳ ಲಿಂಗಾನುಪಾತ ಇಳಿಕೆ: ಮಾಹೆಯಿಂದ ಸರ್ವೆ

ಉಡುಪಿ ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ ಕಡಿಮೆ ಆಗುತ್ತಿದ್ದು, 1000 ಗಂಡು ಮಕ್ಕಳಿಗೆ 2016-17ರಲ್ಲಿ 954, 17-18ರಲ್ಲಿ 927, 18-19ರಲ್ಲಿ 981 ಹೆಣ್ಣಮಕ್ಕಳಿದ್ದಾರೆ. ಈ ಕುರಿತು ಮಣಿಪಾಲ ಮಾಹೆಯಿಂದ ಸರ್ವೆ ನಡೆಸಲಾಗುತ್ತಿದ್ದು, ಅದರ ವರದಿ ಬಂದ ಬಳಿಕವಷ್ಟೆ ನಿಖರವಾದ ಕಾರಣ ತಿಳಿಯಬಹುದಾಗಿದೆ ಎಂದು ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮ್ ರಾವ್ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ 1200 ಗರ್ಭಪಾತ ಪ್ರಕರಣಗಳು ವರದಿ ಯಾಗಿವೆ. ಕಳೆದ ಒಂದು ವರ್ಷದಲ್ಲಿ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿದ್ದ 12 ಅಲ್ಟ್ರಾ ಸ್ಕಾನಿಂಗ್ ಸೆಂಟರ್‌ಗಳಿಗೆ ಸೀಲ್ ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 73 ಸ್ಕಾನಿಂಗ್ ಸೆಂಟರ್‌ಗಳಿವೆ. ಲಿಂಗ ಪತ್ತೆ ಮಾಡುವ ಸ್ಕಾನಿಂಗ್ ಸೆಂಟರ್‌ಗಳ ವಿರುದ್ಧ ದೂರು ನೀಡಿದವರಿಗೆ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ದೂರುಗಳು ಬಂದಿಲ್ಲ ಎಂದರು.

ಹೆಚ್ಚುವರಿ ದರ ವಸೂಲಿ ವಿರುದ್ಧ ಕ್ರಮ: ಡಿಎಚ್‌ಓ

ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆಯ ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಈ ದರ ಪಟ್ಟಿಯಂತೆ ಹಣ ತೆಗೆದುಕೊಳ್ಳ ದಿದ್ದರೆ ಜಿಲ್ಲಾ ನೋಂದಣಾ ಪ್ರಾಧಿಕಾರಕ್ಕೆ ದೂರು ನೀಡಬಹುದಾಗಿದೆ. ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಹೇಳಿದರು.

2014ರಲ್ಲಿ ಎಂಡೋಸಲ್ಫಾನ್‌ಗೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 23 ಶಿಬಿರಗಳನ್ನು ನಡೆಸಿ 1557 ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸ ಲಾಗಿತ್ತು. 2015ರಲ್ಲಿ ನಡೆಸಿದ ಶಿಬಿರದಲ್ಲಿ ಮತ್ತೆ 35 ಮಂದಿಯನ್ನು ಗುರುತಿಸಲಾಗಿದೆ. ಇವರಿಗೆ ಎಂಡೋಸಲ್ಫಾನ್ ನಿಧಿಯಿಂದ ಮಣಿಪಾಲ ಕೆಎಂಸಿ ಯಲ್ಲಿ ಚಿಕಿತ್ಸೆ ಹಾಗೂ ಔಷಧಿ ಮತ್ತು ಸಲಕರಣೆಗಳನ್ನು ನೀಡಲಾಗುತ್ತಿದೆ. ಎಂಡೋಸಲ್ಫಾನ್ ಶಾಶ್ವತ ಪುನರ್‌ವಸತಿ ಕೇಂದ್ರ ಸ್ಥಾಪನೆಗೆ ನಾಡಾ ಗ್ರಾಮದ ಸೇನಾಪುರ ಎಂಬಲ್ಲಿ ಐದು ಎಕರೆ ಜಾಗ ಗುರುತಿಸಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News