ಸರಕಾರಿ ಸೇವೆಗೆ ರಾಜೀನಾಮೆ ನೀಡಿದ ಪದಚ್ಯುತ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ

Update: 2019-01-11 13:37 GMT

ಹೊಸದಿಲ್ಲಿ,ಜ.11:ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿರುವ ಅಲೋಕ್ ವರ್ಮಾ ಅವರು ಶುಕ್ರವಾರ ಅಗ್ನಿಶಾಮಕ ಸೇವೆಗಳ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಮತ್ತು ಸರಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ಗುರುವಾರ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿತ್ತು.

ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗಿ ನಿರೀಕ್ಷಿತ ಪ್ರಾಮಾಣಿಕತೆಯನ್ನು ಪ್ರದರ್ಶಿಸಿಲ್ಲ ಎಂದು ನಿರ್ಧರಿಸಿದ ಬಳಿಕ ಸಮಿತಿಯು ಅವರನ್ನು ಅಗ್ನಿಶಾಮಕ ಸೇವೆಗಳ ವಿಭಾಗಕ್ಕೆ ವರ್ಗಾವಣೆಗೊಳಿಸಿತ್ತು.

ವರ್ಮಾ ಜ.31ರಂದು ಸರಕಾರಿ ಸೇವೆಯಿಂದ ನಿವೃತ್ತರಾಗಲಿದ್ದರು.

ತನ್ನನ್ನು ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲು ಸಹಜ ನ್ಯಾಯವನ್ನು ನಿರಾಕರಿಸಲಾಗಿದೆ ಮತ್ತು ಇಡೀ ಪ್ರಕ್ರಿಯೆಯನ್ನು ಬುಡಮೇಲುಗೊಳಿಸಲಾಗಿದೆ ಎಂದು ವರ್ಮಾ ಶುಕ್ರವಾರ ಹೇಳಿಕೆಯೊಂದರಲ್ಲಿ ಆರೋಪಿಸಿದ್ದಾರೆ.

ವರ್ಮಾ ಮತ್ತು ಸಿಬಿಐ ವಿಶೇಷ ನಿರ್ದೇಶಕ ರಾಕೇಶ ಅಸ್ತಾನಾ ಅವರು ಪರಸ್ಪರ ಭಷ್ಟಾಚಾರದ ಆರೋಪದಲ್ಲಿ ಬಹಿರಂಗ ಕಚ್ಚಾಟದಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಸರಕಾರವು ಇಬ್ಬರನ್ನೂ ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. ತನ್ನ ವಿರುದ್ಧ ಸರಕಾರದ ಕ್ರಮವನ್ನು ವರ್ಮಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಜ.8ರಂದು ಸರಕಾರದ ಆದೇಶವನ್ನು ತಳ್ಳಿಹಾಕಿದ್ದ ಸರ್ವೋಚ್ಚ ನ್ಯಾಯಾಲಯವು ವರ್ಮಾ ಅವರನ್ನು ಮರುನೇಮಕಗೊಳಿಸಿದ್ದು,ಬುಧವಾರ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.

ತಾನು ಕಳಂಕರಹಿತ ಸೇವಾ ದಾಖಲೆಯನ್ನು ಹೊಂದಿರುವುದಾಗಿ ಹೇಳಿಕೆಯಲ್ಲಿ ತಿಳಿಸಿರುವ ವರ್ಮಾ,ಗುರುವಾರದ ಉನ್ನತಾಧಿಕಾರ ಸಮಿತಿಯ ನಿರ್ಧಾರವು ಯಾವುದೇ ಸರಕಾರವು ಕೇಂದ್ರ ಜಾಗ್ರತ ಆಯೋಗ(ಸಿವಿಸಿ)ದ ಮೂಲಕ ಸಿಬಿಐ ಅನ್ನು ಒಂದು ಸಂಸ್ಥೆಯನ್ನಾಗಿ ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದಕ್ಕೆ ಪುರಾವೆಯಾಗಲಿದೆ. ಇದು ಸಾಮೂಹಿಕ ಆತ್ಮಾವಲೋಕನದ ಸಂದರ್ಭವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News