'ದೇವ್ ಬಂದ್ ನ ಬಾಬಾ' ಮೌಲಾನಾ ಹಸೀಬ್ ಸಿದ್ದೀಕಿ ನಿಧನ

Update: 2019-01-11 14:39 GMT

ದೇವ್ ಬಂದ್ , ಜ.11: ಜಮೀಯತ್ ಉಲಮಾ ಹಿಂದ್ ನ ಖಜಾಂಚಿ, ದೇವ್ ಬಂದ್ ನ ವಿಶ್ವವಿಖ್ಯಾತ ಧಾರ್ಮಿಕ ವಿದ್ಯಾ ಸಂಸ್ಥೆ ದಾರುಲ್ ಉಲೂಮ್ ಮಾಜಿ ಅಧ್ಯಕ್ಷ ಹಾಗೂ ದೇವ್ ಬಂದ್ ನ ಹಲವು ಸಮಾಜಮುಖಿ ಚಟುವಟಿಕೆಗಳ ರೂವಾರಿ, ಹಿರಿಯ ಧಾರ್ಮಿಕ ವಿದ್ವಾಂಸ ಮೌಲಾನಾ ಹಸೀಬ್ ಸಿದ್ದೀಕಿ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. 

ದೇವ್ ಬಂದ್ ನಲ್ಲಿ ಬಡ್ಡಿರಹಿತ ಬ್ಯಾಂಕ್ , ಹೆಣ್ಣು ಮಕ್ಕಳಿಗಾಗಿ ಶಾಲೆ, ದೇವ್ ಬಂದ್ ನಲ್ಲಿ ಕಣ್ಣಿನ ಆಸ್ಪತ್ರೆಗಳನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ ಕೀರ್ತಿ ಮೌಲಾನಾ ಹಸೀಬ್ ಅವರದ್ದು. ಜೊತೆಗೆ ವಿವಿಧ ಯೋಜನೆಗಳ ಮೂಲಕ ದೇವ್ ಬಂದ್ ನ ಸಾವಿರಾರು ಯುವಜನತೆಗೆ ಉದ್ಯೋಗ ಕಲ್ಪಿಸಿದ ಶ್ರೇಯವೂ ಅವರಿಗೆ ಸಲ್ಲುತ್ತದೆ. ಸದಾ ಎಲ್ಲರೊಂದಿಗೆ ಬೆರೆತು, ಜನಪರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಹಾಗು ವಿವಿಧ ಜನೋಪಯೋಗಿ ಯೋಜನೆಗಳನ್ನು ದೇವ್ ಬಂದ್ ಗೆ ಪರಿಚಯಿಸಿದ ಮೌಲಾನಾ ಹಸೀಬ್ ಅವರು 'ದೇವ್ ಬಂದ್ ನ ಬಾಬಾ' ಎಂದೇ ಚಿರಪರಿಚಿತರಾಗಿದ್ದರು. 

ಜಮೀಯತ್ ಉಲಮಾದ ಖ್ಯಾತ ನಾಯಕ ಮೌಲಾನಾ ಮಹಮೂದ್ ಮದನಿ ಅವರ ಆಪ್ತರಾಗಿದ್ದ ಮೌಲಾನಾ ಹಸೀಬ್ ಅವರು ದೇವ್ ಬಂದ್ ನಲ್ಲಿ ಸ್ಥಾಪಿಸಿದ್ದ ತರಬೇತಿ ಹಾಗು ಉದ್ಯೋಗ ಕೇಂದ್ರ ಸಾವಿರಾರು ಯುವಜನರ ಪಾಲಿನ ಆಶಾಕಿರಣವಾಗಿ ಬೆಳೆದಿತ್ತು. ಧಾರ್ಮಿಕ ಜ್ಞಾನದ ಜೊತೆ ಉದ್ಯೋಗ ಗಳಿಸುವ, ಬದುಕು ರೂಪಿಸಿಕೊಳ್ಳುವ ತರಬೇತಿ ನೀಡುವುದು ಅತ್ಯಗತ್ಯ ಎಂದು ಮನಗಂಡಿದ್ದ ಮೌಲಾನಾ ಅವರು ಮುಸ್ಲಿಂ ಫಂಡ್ ಟ್ರಸ್ಟ್, ಮದನಿ ಟೆಕ್ನಿಕಲ್ ಇನ್ಸ್ಟಿಟ್ಯೂಟ್ , ಮದನಿ ಕಣ್ಣಿನ ಆಸ್ಪತ್ರೆ, ಹೆಣ್ಣು ಮಕ್ಕಳ ಕಾಲೇಜು, ಕಂಪ್ಯೂಟರ್ ಸೆಂಟರ್ ಇತ್ಯಾದಿ ಹಲವು ಸಂಸ್ಥೆಗಳ ಸ್ಥಾಪನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ದೇವ್ ಬಂದ್ ರೋಟರಿ ಕ್ಲಬ್ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಅವರ ಅಂತಿಮ ಸಂಸ್ಕಾರವನ್ನು ದಾರುಲ್ ಉಲೂಮ್ ನಲ್ಲೇ ನಡೆಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News