ಹತ ಪೊಲೀಸ್ ಅಧಿಕಾರಿಯ ಸೋದರನನ್ನು ಭೇಟಿಯಾದ ಟ್ರಂಪ್

Update: 2019-01-11 15:39 GMT

ವಾಶಿಂಗ್ಟನ್, ಜ. 11: ಕ್ಯಾಲಿಫೋರ್ನಿಯದಲ್ಲಿ ಕ್ರಿಸ್ಮಸ್ ರಾತ್ರಿ ಅಕ್ರಮ ವಲಸಿಗನೊಬ್ಬನಿಂದ ಹತನಾದ ಭಾರತ ಮೂಲದ ಪೊಲೀಸ್ ಅಧಿಕಾರಿ ರೊನಿಲ್ ‘ರಾನ್’ ಸಿಂಗ್‌ರ ಸಹೋದರ ರೆಗ್ಗೀ ಸಿಂಗ್‌ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಭೇಟಿಯಾದರು.

ತನ್ನ ಮಹತ್ವಾಕಾಂಕ್ಷೆಯ ಮೆಕ್ಸಿಕೊ ಗಡಿ ಗೋಡೆಯ ಅವಶ್ಯಕತೆಯನ್ನು ಮನದಟ್ಟು ಮಾಡಲು ದಕ್ಷಿಣದ ಗಡಿ ರಾಜ್ಯ ಟೆಕ್ಸಾಸ್‌ಗೆ ಭೇಟಿ ನೀಡಿದ ವೇಳೆ ಈ ಭೇಟಿ ನಡೆಯಿತು. ಮೆಕ್‌ಅಲನ್ ನಗರದಲ್ಲಿ ನಡೆದ ಗಡಿ ಗಸ್ತು ದುಂಡು ಮೇಜಿನ ಸಭೆಯಲ್ಲಿ ಟ್ರಂಪ್ ಭಾಗವಹಿಸಿದರು. ಈ ಸಭೆಯಲ್ಲಿ ರೆಗ್ಗೀ ಸಿಂಗ್, ಟ್ರಂಪ್‌ರ ಪಕ್ಕದಲ್ಲೇ ಕುಳಿತಿದ್ದರು.

‘‘ಕ್ರಿಸ್ಮಸ್ ಸಂದರ್ಭದಲ್ಲಿ ಒಂದು ಕುಟುಂಬ ದುಃಖದಲ್ಲಿರುವುದನ್ನು ನಾನು ಗಮನಿಸಿದೆ. ರೊನಿಲ್ ಸಿಂಗ್ ಎಂಬ ಅದ್ಭುತ ಪೊಲೀಸ್ ಅಧಿಕಾರಿಯ ಬಗ್ಗೆ, ಅವರು ಮಾಡುತ್ತಿದ್ದ ಕೆಲಸದ ಬಗ್ಗೆ ಅವರ ಸಹೋದರ ರೆಗ್ಗಿ ಕೆಲವೊಂದು ಮಾತುಗಳನ್ನು ಆಡಬೇಕು. ಮೃತ ಪೊಲೀಸ್ ಅಧಿಕಾರಿ ತನ್ನ ಇಲಾಖೆಯಲ್ಲಿ ಹಾಗೂ ಇಲಾಖೆಯಿಂದ ಹೊರಗೂ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೆಗ್ಗೀ ಸಿಂಗ್, ಟ್ರಂಪ್‌ರ ಮೆಕ್ಸಿಕೊ ಗಡಿ ಗೋಡೆ ಕಲ್ಪನೆಯನ್ನು ಶ್ಲಾಘಿಸಿದರು.

‘‘ನನ್ನ ಕುಟುಂಬ ಅನುಭವಿಸಿದ ನೋವನ್ನು ಬೇರೆ ಯಾವ ಕುಟುಂಬವೂ ಅನುಭವಿಸಬಾರದು’’ ಎಂದು ರೆಗ್ಗೀ ಸಿಂಗ್ ಹೇಳಿದರು ಹಾಗೂ ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ಕಟ್ಟುವ ಟ್ರಂಪ್ ಯೋಜನೆಯನ್ನು ಬೆಂಬಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News