ಮ್ಯಾನ್ಮಾರ್: ‘ರಾಯ್ಟರ್ಸ್’ ಪತ್ರಕರ್ತರ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್

Update: 2019-01-11 15:46 GMT

ಯಾಂಗನ್ (ಮ್ಯಾನ್ಮಾರ್), ಜ. 11: ಸರಕಾರಿ ರಹಸ್ಯಗಳ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ಇಬ್ಬರು ಪತ್ರಕರ್ತರ ಮೇಲ್ಮನವಿಗಳನ್ನು ಮ್ಯಾನ್ಮಾರ್‌ನ ಮೇಲ್ಮನವಿ ನ್ಯಾಯಾಲಯವೊಂದು ಶುಕ್ರವಾರ ತಿರಸ್ಕರಿಸಿದೆ.

ಈ ಪತ್ರಕರ್ತರು ಅಮಾಯಕರು ಎಂದು ತೋರಿಸುವ ಸೂಕ್ತ ಪುರಾವೆಯನ್ನು ಮಂಡಿಸಲು ಆರೋಪಿಗಳ ಪರ ವಕೀಲರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ  ಹೇಳಿದೆ.

ವಿಚಾರಣಾ ನ್ಯಾಯಾಲಯವೊಂದು 32 ವರ್ಷದ ವಾ ಲೋನೆ ಮತ್ತು 28 ವರ್ಷದ ಕ್ಯಾವ್ ಸೋ ಓ ಅವರನ್ನು ಸೆಪ್ಟಂಬರ್‌ನಲ್ಲಿ ದೋಷಿಗಳೆಂದು ನಿರ್ಧರಿಸಿತ್ತು.

ಈ ಪ್ರಕರಣವು ಮ್ಯಾನ್ಮಾರ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದಿದೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಹಾಗೂ ರಾಜತಾಂತ್ರಿಕರು ಮತ್ತು ಮಾನವಹಕ್ಕುಗಳ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದೆ.

‘‘ಅದು ಸರಿಯಾದ ಶಿಕ್ಷೆಯಾಗಿದೆ’’ ಎಂದು ಹೇಳಿದ ಹೈಕೋರ್ಟ್ ನ್ಯಾಯಾಧೀಶ ಆಂಗ್ ನೈಂಗ್, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದರು.

ರಾಯ್ಟರ್ಸ್ ಪತ್ರಕರ್ತರ ವಕೀಲರು ಇನ್ನು ಕೊನೆಯ ಪ್ರಯತ್ನವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News