5 ದಿನಗಳ ಬಳಿಕ ಚಂದ್ರ ಶೋಧಕ ನೌಕೆಯ ಕೆಲಸ ಪುನರಾರಂಭ

Update: 2019-01-11 15:49 GMT

ಬೀಜಿಂಗ್, ಜ. 11: ಐದು ದಿನಗಳ ನಿದ್ದೆಯಿಂದ ಎದ್ದ ಚೀನಾದ ಚಂದ್ರ ಶೋಧಕ ನೌಕೆ ‘ಯುಟು-2’ ಗುರುವಾರ ಚಂದ್ರನ ಕತ್ತಲ ಭಾಗದಲ್ಲಿ ಮತ್ತೆ ಕೆಲಸದಲ್ಲಿ ತೊಡಗಿದೆ.

‘‘ಮಧ್ಯಾಹ್ನದ ನಿದ್ದೆ ಮುಗಿದಿದೆ. ಅದು ಎಚ್ಚೆತ್ತು ಚಲನೆಯಲ್ಲಿ ತೊಡಗಿದೆ’’ ಎಂದು ಸಾಮಾಜಿಕ ಜಾಲ ತಾಣ ‘ವೈಬೊ’ದಲ್ಲಿರುವ ‘ಯುಟು-2’ ಪುಟದಲ್ಲಿ ಹೇಳಲಾಗಿದೆ.

ಶೋಧ ನೌಕೆಯು ಶನಿವಾರ 200 ಡಿಗ್ರಿ ಸೆಲ್ಸಿಯಸ್‌ನತ್ತ ಸಾಗುತ್ತಿದ್ದ ಉಷ್ಣತೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ನಿಷ್ಕ್ರಿಯ ಸ್ಥಿತಿಗೆ ಜಾರಿತ್ತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ)ಯ ‘ಚೀನಾ ಚಂದ್ರ ಶೋಧಕ ಕಾರ್ಯಕ್ರಮ’ ಹೇಳಿತ್ತು.

140 ಕಿಲೋಗ್ರಾಂ ಭಾರದ ಯುಟು-2 ತನ್ನ ಚಟುವಟಿಕೆಗಳನ್ನು ಆರಂಭಿಸಿದ್ದು, ಶೋಧ ನೌಕೆಯ ಮಾತೃ ನೌಕೆಯ ಚಿತ್ರಗಳನ್ನು ತೆಗೆದಿದೆ.

 ಯುಟು-2 ಚಂದ್ರ ಶೋಧ ನೌಕೆಯನ್ನು ಹೊತ್ತ ಮಾತೃ ನೌಕೆ ‘ಚಾಂಗ್’ಇ-4’ ಜನವರಿ 3ರಂದು ಚಂದ್ರನ ಭೂಮಿಗೆ ಕಾಣದ ಮಗ್ಗುಲಲ್ಲಿ ಇಳಿದಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News