ಅಮೆರಿಕಾದಲ್ಲಿ ತುರ್ತು ಪರಿಸ್ಥಿತಿ ಜಾರಿ ಸಂಭವ ?

Update: 2019-01-11 16:04 GMT

ವಾಶಿಂಗ್ಟನ್, ಜ. 11: ಮೆಕ್ಸಿಕೊ ಗಡಿ ಗೋಡೆ ಕಟ್ಟುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಿದ್ದಾರೆ ಎಂಬ ಊಹಾಪೋಹಗಳು ಹರಡಿವೆ.

ಟ್ರಂಪ್ ತುರ್ತು ಪರಿಸ್ಥಿತಿ ಘೋಷಿಸಲು ಸಾಧ್ಯವಾಗುವಂತೆ ಶ್ವೇತಭವನದ ಅಧಿಕಾರಿಗಳು ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ಖರ್ಚಾಗದೆ ಉಳಿದ ಹಣವನ್ನು ಗಡಿಗೋಡೆಗೆ ಬಳಸಬಹುದೇ ಎನ್ನುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಶ್ವೇತಭವನವು ಈಗಾಗಲೇ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದೆ.

ಪ್ರತಿಪಕ್ಷ ಡೆಮಾಕ್ರಟಿಕ್ ನಾಯಕರ ಜೊತೆ ನಡೆದ ಮಾತುಕತೆಗಳು ಅರ್ಧದಲ್ಲೇ ಕೊನೆಗೊಂಡಿವೆ. ಆಡಳಿತಾರೂಢ ರಿಪಬ್ಲಿಕನ್ ಸಂಸದರ ಗುಂಪೊಂದು ಸೂಚಿಸಿದ ರಾಜಿ ಒಪ್ಪಂದವೊಂದು ವಿಫಲವಾಗಿದೆ. ಇತರ ಹಲವಾರು ಪ್ರಸ್ತಾಪಗಳು ಪರಿಗಣನೆಯಲ್ಲಿರುವಂತೆಯೇ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಿಕೆಯ ಮಾತುಗಳು ಚಾಲ್ತಿಯಲ್ಲಿವೆ.

ತುರ್ತು ಪರಿಸ್ಥಿತಿ ಹೇರಿಕೆಗೆ ಟ್ರಂಪ್ ವಿರೋಧವಿಲ್ಲ. ಇದನ್ನು ಅವರು ಕಳೆದ ಕೆಲವು ದಿನಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ, ಸಂಧಾನದ ಮೂಲಕ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಅವರು ಈವರೆಗೆ ಒತ್ತು ನೀಡಿದ್ದಾರೆ.

ಆದರೆ, ಡೆಮಾಕ್ರಟಿಕ್ ನಾಯಕರ ಜೊತೆ ಬುಧವಾರ ನಡೆದ ಸಂಧಾನವೂ ಮುರಿದು ಬಿದ್ದಿದೆ. ಅವರು ‘ಬಾಯ್... ಬಾಯ್’ ಎನ್ನುತ್ತಾ ಸಭೆಯಿಂದ ಹೊರಬಂದಿದ್ದಾರೆ.

ಹಾಗಾಗಿ, ಟ್ರಂಪ್‌ರ ಮುಂದಿನ ನಡೆಯ ಬಗ್ಗೆ ಎಲ್ಲರೂ ಕುತೂಹಲಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News