ಅಲೋಕ್ ವರ್ಮ ಮಾಡಿದ್ದ ವರ್ಗಾವಣೆ ನಿರ್ಧಾರ ರದ್ದುಗೊಳಿಸಿದ ನಾಗೇಶ್ವರ ರಾವ್

Update: 2019-01-11 16:12 GMT

ಹೊಸದಿಲ್ಲಿ, ಜ.11: ಸಿಬಿಐ ಅಧಿಕಾರಿಗಳ ವರ್ಗಾವಣೆ ಕುರಿತು ಮಾಜಿ ನಿರ್ದೇಶಕ ಅಲೋಕ್ ವರ್ಮ ಕೈಗೊಂಡಿದ್ದ ಎಲ್ಲಾ ನಿರ್ಧಾರಗಳನ್ನೂ ಹಂಗಾಮಿ ಸಿಬಿಐ ನಿರ್ದೇಶಕ ರಾಗಿ ಅಧಿಕಾರ ವಹಿಸಿಕೊಂಡ ಎಂ.ನಾಗೇಶ್ವರ್ ರಾವ್ ರದ್ದುಗೊಳಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಸೂಚನೆಯಂತೆ ಮಂಗಳವಾರ ಮತ್ತೆ ಸಿಬಿಐ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದ ವರ್ಮ, ಹಂಗಾಮಿ ನಿರ್ದೇಶಕರಾಗಿದ್ದ ನಾಗೇಶ್ವರ್ ರಾವ್ ಕೈಗೊಂಡಿದ್ದ ನಿರ್ಧಾರಗಳನ್ನು ಪರಿಷ್ಕರಿಸಿ, 10 ಅಧಿಕಾರಿಗಳ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ್ದರೆ ಐವರು ಅಧಿಕಾರಿಗಳನ್ನು ವರ್ಗಾಯಿಸಿದ್ದರು. ಆದರೆ ಗುರುವಾರ ಅಲೋಕ್ ವರ್ಮರನ್ನು ಪ್ರಧಾನಿ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಸಿಬಿಐ ಹುದ್ದೆಯಿಂದ ವಜಾಗೊಳಿಸಿ, ಮತ್ತೆ ನಾಗೇಶ್ವರ್ ರಾವ್‌ರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿದೆ.

ಶುಕ್ರವಾರ ಅಧಿಕಾರ ಸ್ವೀಕರಿಸಿದ ನಾಗೇಶ್ವರ್ ರಾವ್, ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ತಾನು ನೀಡಿದ್ದ ಆದೇಶವನ್ನು ಮರು ಜಾರಿಗೊಳಿಸಿದ್ದಾರೆ. ಅಲ್ಲದೆ ವರ್ಮಾ ಮಾಡಿದ್ದ ಐವರು ಅಧಿಕಾರಿಗಳ ವರ್ಗಾವಣೆಯನ್ನು ರದ್ದುಗೊಳಿಸಿದ್ದಾರೆ. ಸಿಬಿಐಯ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧದ ಪ್ರಕರಣಗಳ ತನಿಖೆಗೆ ಐಪಿಎಸ್ ಅಧಿಕಾರಿ ಮೋಹಿತ್ ಗುಪ್ತಾರನ್ನು ನೂತನ ತನಿಖಾಧಿಕಾರಿಯಾಗಿ ಅಲೋಕ್ ವರ್ಮ ನೇಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News