ಮೋದಿಯಷ್ಟು ಅಸಂಗತ, ಗೊಂದಲದ ಪ್ರಧಾನಿಯನ್ನು ದೇಶ ಕಂಡಿಲ್ಲ : ಅಖಿಲೇಶ್ ಯಾದವ್

Update: 2019-01-11 16:17 GMT

ಲಕ್ನೊ, ಜ.11: ಸಿಬಿಐ ತನಿಖೆ ನಮಗೆ ಹೊಸದಲ್ಲ. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲೂ ನಮ್ಮ ವಿರುದ್ಧ ಸಿಬಿಐ ತನಿಖೆಯ ಅಸ್ತ್ರ ಪ್ರಯೋಗಿಸಲಾಗಿತ್ತು ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

2012-13ರಲ್ಲಿ ಅಖಿಲೇಶ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿರುವ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಅವರ ವಿರುದ್ಧ ಸಿಬಿಐ ತನಿಖೆ ಆರಂಭಿಸುವ ಸಾಧ್ಯತೆಯಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಅಧಿಕಾರಾವಧಿಯಲ್ಲಿ ನೇತಾಜಿ(ಮುಲಾಯಂ ಸಿಂಗ್ ಯಾದವ್), ತನ್ನ ಪತ್ನಿ ಡಿಂಪಲ್ ಹಾಗೂ ತನ್ನ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು. ಈ ಬಗ್ಗೆ ತಾನು ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸಲೇಬೇಕು. ಯಾಕೆಂದರೆ ತನಿಖೆ ನಡೆದಿದ್ದರಿಂದ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಪತ್ರಗಳನ್ನೂ ಸಂಗ್ರಹಿಸಿಟ್ಟುಕೊಂಡಿದ್ದೇವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಆಗಿಂದಾಗ್ಗೆ ಸಿಬಿಐ ತನಿಖೆ ನಡೆಯುತ್ತಿದ್ದರೆ ದಾಖಲೆಪತ್ರಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ತಪ್ಪೆಸಗದಂತೆ ನಮ್ಮನ್ನು ತಡೆಯುತ್ತದೆ. ಸಾಧ್ಯವಾದಷ್ಟು ಬೇಗ ನಮ್ಮನ್ನು ತನಿಖೆ ಮಾಡಿ ಮುಗಿಸಿದರೆ ಚುನಾವಣೆಯ ಬಗ್ಗೆ ಗಮನ  ಹರಿಸಲು ಸಾಧ್ಯವಾಗುತ್ತದೆ ಎಂದು ಹಾಸ್ಯದ ಧ್ವನಿಯಲ್ಲಿ ಹೇಳಿದರು. ನರೇಂದ್ರ ಮೋದಿಯಷ್ಟು ಅಸಂಗತ, ಗೊಂದಲದ ಪ್ರಧಾನಿಯನ್ನು ದೇಶದ ಜನತೆ ಇದುವರೆಗೂ ಕಂಡಿಲ್ಲ. ನೋಟು ರದ್ದತಿ ಅಥವಾ ಜಿಎಸ್‌ಟಿಯಿಂದ ಏನೂ ಪ್ರಯೋಜನವಾಗಿಲ್ಲ. ಆದರೂ ಬಿಜೆಪಿಯವರು ಮತ್ತೊಬ್ಬರನ್ನು ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂದು ಲೇವಡಿ ಮಾಡುತ್ತಿದ್ದಾರೆ ಎಂದು ಅಖಿಲೇಶ್ ಟೀಕಿಸಿದರು.

ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆ ಸೂತ್ರದ ಕುರಿತು ಒಮ್ಮತ ಮೂಡದ ಕಾರಣ ಮೈತ್ರಿಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಸಮಾಜವಾದಿ ಪಕ್ಷ ಹಾಗೂ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News