ಬಿಜೆಪಿ ನೇತೃತ್ವದ ಮಣಿಪುರ ಸರಕಾರದಿಂದ ಕೇಂದ್ರದ ಪೌರತ್ವ ಮಸೂದೆಗೆ ವಿರೋಧ

Update: 2019-01-11 17:02 GMT

ಇಂಪಾಲ,ಜ.11: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಮಸೂದೆಗೆ ಬಿಜೆಪಿ ನೇತೃತ್ವದ ಮಣಿಪುರ ಸರಕಾರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯವನ್ನು ಈ ಮಸೂದೆಯಿಂದ ಹೊರಗಿಡುವಂತೆ ಮನವಿ ಮಾಡಿದೆ. ಈ ಕುರಿತು ಮಣಿಪುರ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿವಾದಾತ್ಮಕ ಕಾನೂನಿನಿಂದ ರಾಜ್ಯವನ್ನು ಹೊರಗಿಡುವಂತೆ ಪ್ರಧಾನ ಮಂತ್ರಿಗೆ ಮನವಿ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತಾವಿತ ಮಸೂದೆಯು, ಮೂರು ನೆರೆರಾಷ್ಟ್ರಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಶೀಘ್ರಗೊಳಿಸುವ ಉದ್ದೇಶವನ್ನು ಹೊಂದಿದೆ. ವಿಪಕ್ಷಗಳು ಇದನ್ನು ತಾರತಮ್ಯದಿಂದ ಕೂಡಿದ ಮಸೂದೆ ಎಂದು ದೂರಿದ್ದರೆ, ಈಶಾನ್ಯ ರಾಜ್ಯಗಳ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಮಣಿಪುರ ಮುಖ್ಯಮಂತ್ರಿಯ ಕಾರ್ಯಾಲಯ ಹೊರಡಿಸಿರುವ ಮಾಧ್ಯಮ ಪ್ರಕಟನೆಯಲ್ಲಿ, ಮೈತ್ರಿ ಸರಕಾರದ ಮಿತ್ರಪಕ್ಷಗಳು ಈ ಮಸೂದೆಗೆ ವಿರೋಧ ಸೂಚಿಸಿವೆ ಎಂದು ತಿಳಿಸಲಾಗಿದೆ.

ಮಣಿಪುರದಲ್ಲಿ ನ್ಯಾಶನಲ್ ಪೀಪಲ್ಸ್ ಪಾರ್ಟಿ, ನಾಗಾ ಪೀಪಲ್ಸ್ ಫ್ರಂಟ್ ಮತ್ತು ಲೋಕ ಜನಶಕ್ತಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರಕಾರ ನಡೆಸುತ್ತಿದೆ. ಮಸೂದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳ ಹಲವು ಪಕ್ಷಗಳು ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳುವುದಾಗಿ ಹೇಳಿಕೆ ನೀಡಿವೆ. ಅಸ್ಸಾಂನಲ್ಲಿ ಅಸೊಮ್ ಗಣ ಪರಿಷದ್, ಮಣಿಪುರದಲ್ಲಿ ಮಿರೊ ನ್ಯಾಶನಲ್‌ ಫ್ರಂಟ್, ಮೇಘಾಲಯದಲ್ಲಿ ಎನ್‌ ಪಿಪಿ, ತ್ರಿಪುರದಲ್ಲಿ ಸ್ವದೇಶೀ ಪೀಪಲ್ಸ್ ಫ್ರಂಟ್ ಮತ್ತು ನಾಗಾಲ್ಯಾಂಡ್‌ನಲ್ಲಿ ನ್ಯಾಶನಲಿಸ್ಟಿಕ್ ಡೆಮಾಕ್ರಾಟಿಕ್ ಪ್ರೋಗ್ರೆಸಿವ್ ಪಾರ್ಟಿ ತಮ್ಮ ವಿರೊಧ ವ್ಯಕ್ತಪಡಿಸಿವೆ. ಅಸೊಮ್ ಗಣ ಪರಿಷದ್ ಈಗಾಗಲೇ ಬಿಜೆಪಿ ಸಖ್ಯವನ್ನು ತೊರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News