ಎಸ್ಸೆಸ್ಸೆಫ್ 'ಹಿಂದ್ ಸಫರ್'ಗೆ ಕಾಶ್ಮೀರದಲ್ಲಿ ಚಾಲನೆ

Update: 2019-01-11 17:14 GMT

ಹೊಸದಿಲ್ಲಿ,ಜ.11: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಷ್ಟ್ರೀಯ ಸಮ್ಮೇಳನದ ಪ್ರಚಾರಾರ್ಥ ಕಾಶ್ಮೀರದಿಂದ ಕೇರಳ ತನಕ ನಡೆಸಲಾಗುವ 'ಸಫರ್ ಹಿಂದ್' ರಾಷ್ಟ್ರೀಯ ಪರ್ಯಟನೆಗೆ ಕಾಶ್ಮೀರದ ಹಝ್ರತ್ ಬಾಲ್ ಮಸೀದಿಯಲ್ಲಿ ಚಾಲನೆ ನೀಡಲಾಯಿತು. 

ಶ್ರೀ ನಗರ ವಕ್ಫ್ ಬೋರ್ಡ್ ಅಧ್ಯಕ್ಷ ಡಾ. ಕಮಾಲುದ್ದೀನ್ ಫಾರೂಕಿಯವರು ಯಾತ್ರಾ ತಂಡಕ್ಕೆ ಧ್ವಜ ಹಸ್ತಾಂತರಿಸುವ ಮೂಲಕ ಭಾರತ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಯಾತ್ರೆಯ ಮೂಲಕ ದೇಶದ ವಿವಿಧತೆಯನ್ನು ಅರಿತುಕೊಳ್ಳಲು ಹಾಗೂ ಸಹಿಷ್ಣುತೆ ಮತ್ತು ಸೌಹಾರ್ದತೆಯನ್ನು ಹರಡಲು ಸಾಧ್ಯವಾಗಲಿ ಎಂದು ಹಾರೈಸಿದರು.  

'ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ' (ರಿಯಲೈಸಿಂಗ್ ಲಿಟರರಿ ಆಂಡ್ ಟೋಲರೆಂಟ್ ಇಂಡಿಯಾ) ಎಂಬ ಧ್ಯೇಯವಾಕ್ಯದೊಂದಿಗೆ 
28 ದಿನಗಳ ಕಾಲ ನಡೆಯುವ ಪರ್ಯಟನೆಯು 22 ರಾಜ್ಯಗಳ 40 ಕೇಂದ್ರಗಳಲ್ಲಿ ಸಮಾವೇಶಗೊಳ್ಳಲಿದ್ದು, ಜೆಎನ್ಯು, ಅಲೀಘರ್ ಮೊದಲಾದ ಪ್ರಮುಖ ವಿವಿ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದೆ. ಯಾತ್ರೆಯು 13,000 ಕಿ.ಮೀ. ಕ್ರಮಿಸಲಿದೆ. ಫೆ.3ರಿಂದ 6 ರವರೆಗೆ ಕರ್ನಾಟಕದಲ್ಲಿ ಪರ್ಯಟನೆ ನಡೆಸಲಿದ್ದು, ರಾಜ್ಯದ ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರು, ಮಂಗಳೂರು ಮತ್ತು ಮೈಸೂರುಗಳಲ್ಲಿ ಸಮಾವೇಶಗೊಳ್ಳಲಿದೆ. ಫೆ.7ರಂದು ಕೇರಳದ ಕಲ್ಲಿಕೋಟೆಯಲ್ಲಿ ಸಮಾರೋಪಗೊಳ್ಳಲಿದ್ದು, ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಭಾಗವಹಿಸುವರು. 

ಯಾತ್ರೆಯನ್ನು ಎಸ್ಸೆಸ್ಸೆಫ್  ರಾಷ್ಟ್ರೀಯ ನಾಯಕರಾದ ಮೌಲಾನಾ ಶೌಕತ್ ಬುಖಾರಿ ಕಾಶ್ಮೀರ, ಡಾ. ಫಾರೂಖ್ ನಈಮಿ, ಕೆ.ಎಂ. ಅಬೂಬಕರ್ ಸಿದ್ದೀಕ್, ಝುಹೈರುದ್ದೀನ್ ನೂರಾನಿ ಕೋಲ್ಕತ್ತಾ, ಸಾಲಿಕ್ ಲತೀಫಿ ಅಸ್ಸಾಮ್, ನೌಶದ್ ಮಿಸ್ಬಾಹಿ ಒರಿಸ್ಸಾ ಮೊದಲಾದವರು ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News