ಪತ್ರಕರ್ತ ರಜತ್ ಶರ್ಮಾ ವಿರುದ್ಧ ಜಾಹೀರಾತು ನೀಡದಂತೆ ಝೀ ಮೀಡಿಯಾಕ್ಕೆ ನಿರ್ಬಂಧ

Update: 2019-01-11 17:15 GMT

ಹೊಸದಿಲ್ಲಿ,ಜ.11: ಝೀ ಮೀಡಿಯಾವು ಹಿರಿಯ ಪತ್ರಕರ್ತ,ಇಂಡಿಯಾ ಟಿವಿಯ ಮುಖ್ಯ ಸಂಪಾದಕ ರಜತ್ ಶರ್ಮಾ ಅವರ ಹೆಸರನ್ನೊಳಗೊಂಡ ಜಾಹೀರಾತುಗಳನ್ನು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಿಗೆ ನೀಡುವುದನ್ನು ನಿರ್ಬಂಧಿಸಿ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.

ಝೀ ಮೀಡಿಯಾ ತನ್ನ ಜಾಹೀರಾತುಗಳಲ್ಲಿ ‘ಇಂಡಿಯಾ ಮೆ ಅಬ್ ರಜತ್ ಕಿ ಅದಾಲತ್ ಬಂದ್’ ಎಂಬ ವಾಕ್ಯವನ್ನು ಬಳಸಿದ್ದು, ಇದನ್ನು ಆಕ್ಷೇಪಿಸಿ ಶರ್ಮಾ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ತನ್ನ ಹೆಸರನ್ನು ದುರುದ್ದೇಶಪೂರ್ವಕವಾಗಿ ಬಳಸಿಕೊಂಡು ಝೀ ಹಿಂದುಸ್ಥಾನ ಸುದ್ದಿವಾಹಿನಿಯು ನೀಡಿರುವ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಝೀ ಮೀಡಿಯಾಕ್ಕೆ ನಿರ್ದೇಶ ನೀಡುವಂತೆ ಅವರು ಕೋರಿದ್ದರು.

ಜಾಹೀರಾತುಗಳಲ್ಲಿ ಶರ್ಮಾರ ಹೆಸರನ್ನು ಪ್ರಸ್ತಾಪಿಸಿರುವುದು ಅಕ್ರಮವಾಗಿದೆ ಮತ್ತು ಹಾಗೆ ಮಾಡಲು ಝೀ ಮೀಡಿಯಾಕ್ಕೆ ಅನುಮತಿ ನೀಡುವಂತಿಲ್ಲ ಎಂದು ನ್ಯಾ.ಜಯಂತ ನಾಥ್ ಅವರು ಏಕಪಕ್ಷೀಯ ವಿಚಾರಣೆ ಸಂದರ್ಭ ತನ್ನ ಆದೇಶದಲ್ಲಿ ಹೇಳಿದ್ದಾರೆ.

ಶರ್ಮಾ ಅವರ ಹೆಸರು ಇರುವ ಯಾವುದೇ ಜಾಹೀರಾತು ಫಲಕವನ್ನು ಮೂರು ದಿನಗಳಲ್ಲಿ ತೆಗೆಯುವಂತೆಯೂ ಅವರು ಆದೇಶಿಸಿದ್ದಾರೆ.

ಎ.10ರಂದು ನ್ಯಾಯಾಲಯದಲ್ಲಿ ಹಾಜರಾಗಿ ದೂರಿಗೆ ಉತ್ತರಿಸುವಂತೆ ನ್ಯಾ.ನಾಥ್ ಅವರು ಝೀ ಮೀಡಿಯಾ ಮತ್ತು ಅದರ ಆಡಳಿತ ನಿರ್ದೇಶಕರಿಗೆ ಸಮನ್ಸ್ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News