ಸಿಬಿಎಸ್‌ಇ 10ನೆ ತರಗತಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ

Update: 2019-01-11 17:54 GMT

ಹೊಸದಿಲ್ಲಿ, ಜ.11: 2020ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆ ಎರಡು ಹಂತದಲ್ಲಿ ನಡೆಯಲಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ಘೋಷಿಸಿದೆ. ಎರಡು ಹಂತದ ಪರೀಕ್ಷೆಯಿಂದ ವಿವಿಧ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ ಮತ್ತು ವಿದ್ಯಾರ್ಥಿಗಳ ಮೇಲಿರುವ ಒತ್ತಡವನ್ನು ಕಡಿಮೆಗೊಳಿಸುತ್ತದೆ ಎಂದು ಜನವರಿ 10ರಂದು ಸಿಬಿಎಸ್‌ಇ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಗಣಿತ- ಸಾಮಾನ್ಯ (ಈಗಿರುವ ಪಠ್ಯಕ್ರಮ) ಮತ್ತು ಗಣಿತ- ಮೂಲ (ಸುಲಭ ಗಣಿತ) ಎಂಬ ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಎರಡೂ ವಿಷಯಗಳಿಗೂ ಪಠ್ಯಕ್ರಮ, ತರಗತಿ ಬೋಧನೆ, ಆಂತರಿಕ ಮೌಲ್ಯಮಾಪನ ಈಗಿನಂತೆಯೇ ಇರುತ್ತದೆ.

ಗಣಿತದಲ್ಲಿ ಉನ್ನತ ಅಧ್ಯಯನ ನಡೆಸ ಬಯಸುವವರಿಗೆ ಗಣಿತ- ಸಾಮಾನ್ಯ ಹಂತ ನೆರವಾಗುತ್ತದೆ. ಗಣಿತ-ಮೂಲ ಹಂತವು ಇತರ ವಿದ್ಯಾರ್ಥಿಗಳಿಗಾಗಿದೆ. ಶಾಲೆಗಳು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಿಬಿಎಸ್‌ಇಗೆ ಆನ್‌ಲೈನ್ ಮೂಲಕ ಸಲ್ಲಿಸುವಾಗ , ತನಗೆ ಯಾವ ಹಂತ ಸೂಕ್ತ ಎಂಬುದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಗಣಿತ- ಸಾಮಾನ್ಯ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿ, ಸಾಮಾನ್ಯ ಅಥವಾ ಮೂಲ- ಯಾವುದಾದರೂ ಹಂತದಲ್ಲಿ ಮತ್ತೆ ಪರೀಕ್ಷೆ ಬರೆಯಬಹುದು. ಆದರೆ ಮೂಲ ಹಂತದಲ್ಲಿ ಫೇಲಾದ ವಿದ್ಯಾರ್ಥಿ ಆ ಹಂತದಲ್ಲಿ ಮಾತ್ರ ಮರುಪರೀಕ್ಷೆ ಬರೆಯಬಹುದು.

   ಗಣಿತ- ಮೂಲ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ಗಣಿತ- ಸಾಮಾನ್ಯ ವಿಷಯದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News