ಆತಿಥೇಯ ಆಸ್ಟ್ರೇಲಿಯಕ್ಕೆ ಭಾರತ ಎದುರಾಳಿ

Update: 2019-01-11 18:10 GMT

ಸಿಡ್ನಿ, ಜ.11: ಕಾಂಗರೂನಾಡಿನಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ವಿಜಯದ ಸಂಭ್ರಮದಲ್ಲಿರುವ ಟೀಮ್ ಇಂಡಿಯಾ ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ತಯಾರಿ ಭಾಗವಾಗಿ ಶನಿವಾರದಿಂದ ಆಸ್ಟ್ರೇಲಿಯ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ.

ಆಸೀಸ್‌ನಲ್ಲಿ ಮೊತ್ತ ಮೊದಲ ಟೆಸ್ಟ್ ಸರಣಿ ಗೆದ್ದ ಸಂಭ್ರಮದ ಗುಂಗಿನಲ್ಲಿದ್ದ ಭಾರತ ತಂಡ ಅನಿರೀಕ್ಷಿತ ವಿವಾದದಿಂದ ವಿಚಲಿತವಾಗಿದೆ. ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಟಿವಿ ಶೋವೊಂದರಲ್ಲಿ ಮಹಿಳೆಯರ ಕುರಿತು ನೀಡಿದ್ದ ಅಸಂಬದ್ಧ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ರಾಹುಲ್‌ರನ್ನು ಮೊದಲ ಪಂದ್ಯಕ್ಕೆ ಪರಿಗಣಿಸದಂತೆ ಬಿಸಿಸಿಐ ಟೀಮ್ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದೆ. ಹೀಗಾಗಿ ಇಬ್ಬರು ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಟೆಸ್ಟ್ ಸರಣಿಯಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ರಾಹುಲ್ ಬದಲಿಗೆ ಆರಂಭಿಕ ಆಟಗಾರ ರೋಹಿತ್ ಶರ್ಮಾರೊಂದಿಗೆ ಶಿಖರ್ ಧವನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಪಾಂಡ್ಯ ಅನುಪಸ್ಥಿತಿ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಏಕದಿನ ತಂಡಕ್ಕೆ ನಿರ್ಣಾಯಕ ಸಮತೋಲನ ನೀಡಬಲ್ಲ ಪಾಂಡ್ಯಗೆ 10 ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯವಿದೆ. ಮಾತ್ರವಲ್ಲ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು.

ಪಾಂಡ್ಯ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಬೌಲಿಂಗ್ ದಾಳಿಯಲ್ಲಿ ಬದಲಾವಣೆ ಮಾಡಬೇಕಾಗಿದೆ. ಪ್ರಮುಖ ವೇಗಿ ಜಸ್‌ಪ್ರಿತ್ ಬುಮ್ರಾರನ್ನು ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಭುವನೇಶ್ವರ ಕುಮಾರ್ ಅವಕಾಶ ಗಿಟ್ಟಿಸಿಕೊಳ್ಳಬಹುದು. ಆದರೆ ಎಲ್ಲವೂ ಕೊಹ್ಲಿ ನಿರ್ಧಾರವನ್ನು ಅವಲಂಬಿಸಿದೆ.

ಪಾಂಡ್ಯರಿಂದ ತೆರವಾದ ಸ್ಥಾನವನ್ನು ಆಲ್‌ರೌಂಡರ್ ರವೀಂದ್ರ ಜಡೇಜ ತುಂಬಲಿದ್ದಾರೆ. ಕೇದಾರ್ ಜಾಧವ್ ಪಾರ್ಟ್ ಟೈಮ್ ಬೌಲರ್ ಕೊರತೆ ನೀಗಿಸಲಿದ್ದಾರೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಜಾಧವ್, ಎಂಎಸ್ ಧೋನಿ ಹಾಗೂ ಅಂಬಟಿ ರಾಯುಡು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಧೋನಿ ತಂಡಕ್ಕೆ ವಾಪಸಾಗಿದ್ದಾರೆ. ಆದರೆ ಅವರು 2018ರಲ್ಲಿ 20 ಏಕದಿನ ಪಂದ್ಯಗಳಲ್ಲಿ ಕೇವಲ 275 ರನ್ ಗಳಿಸಿದ್ದರು. ಒಂದು ಅರ್ಧಶತಕವನ್ನೂ ಗಳಿಸಿರಲಿಲ್ಲ. ರಾಯುಡು 4ನೇ ಕ್ರಮಾಂಕದಲ್ಲಿ ಆಡಲಿದ್ದು, ಕಳೆದ ಸೆಪ್ಟಂಬರ್‌ನಲ್ಲಿ ನಡೆದ ಏಶ್ಯಕಪ್‌ನಿಂದ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲ ನೀಡುತ್ತಿದ್ದಾರೆ. ಏಶ್ಯಕಪ್‌ನಲ್ಲಿ ಅವರು 11 ಏಕದಿನಗಳಲ್ಲಿ 392 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ 3 ಅರ್ಧಶತಕಗಳಿವೆ.

►ಆಸ್ಟ್ರೇಲಿಯದಲ್ಲಿ ಭಾರತದ ಕಳಪೆ ದಾಖಲೆ

ಭಾರತ 2014ರಲ್ಲಿ ಆಸೀಸ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿತ್ತು. 1-4 ರಿಂದ ಸೋತ 5 ಪಂದ್ಯಗಳ ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ರೋಹಿತ್ ಹಾಗೂ ಕೊಹ್ಲಿ ಕ್ರಮವಾಗಿ 441 ಹಾಗೂ 381 ರನ್ ಗಳಿಸಿದ್ದರು. ಧವನ್ 287 ರನ್ ಕಲೆ ಹಾಕಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಕೊಡುಗೆ ಬಂದಿರಲಿಲ್ಲ. ಮನೀಷ್ ಪಾಂಡೆ ಕೊನೆಯ ಏಕದಿನದಲ್ಲಿ ಶತಕ ದಾಖಲಿಸಿ ಭಾರತ 0-5 ಅಂತರದ ಕ್ಲೀನ್‌ಸ್ವೀಪ್‌ನಿಂದ ಪಾರು ಮಾಡಿದ್ದರು.

ಆಸ್ಟ್ರೇಲಿಯದಲ್ಲಿ ಭಾರತದ ಏಕದಿನ ದಾಖಲೆ ಕಳಪೆಯಾಗಿದೆ. 1985ರ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2008ರ ಸಿಬಿ ಸರಣಿ ಗೆಲುವು ಹೊರತುಪಡಿಸಿ ಭಾರತ ತಂಡ ಆಸ್ಟ್ರೇಲಿಯ ನೆಲದಲ್ಲಿ ಆಡಿದ್ದ 48 ಏಕದಿನ ಪಂದ್ಯಗಳ ಪೈಕಿ 35ರಲ್ಲಿ ಸೋತಿದೆ.

►ವಾರ್ನರ್, ಸ್ಮಿತ್ ಗೈರಿನ ಲಾಭವೆತ್ತಲು ಕೊಹ್ಲಿ ಪಡೆ ಚಿಂತನೆ

ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅನುಪಸ್ಥಿತಿ ಭಾರತಕ್ಕೆ ಮತ್ತೊಮ್ಮೆ ವರವಾಗುವ ಸಾಧ್ಯತೆಯಿದೆ. 2016ರಲ್ಲಿ ವಾರ್ನರ್ 3 ಪಂದ್ಯಗಳಲ್ಲಿ 220 ರನ್ ಹಾಗೂ ಸ್ಮಿತ್ 5 ಪಂದ್ಯಗಳಲ್ಲಿ 315 ರನ್ ಗಳಿಸಿ ತಂಡದ ಭರ್ಜರಿ ಗೆಲುವಿಗೆ ನೆರವಾಗಿದ್ದರು. ಪ್ರಸ್ತುತ ಸರಣಿಯಿಂದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೆಝಲ್‌ವುಡ್‌ಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯ ಈಗಾಗಲೇ ಆಡುವ 11ರ ಬಳಗ ಪ್ರಕಟಿಸಿದೆ. ನಥಾನ್ ಲಿಯೊನ್ ತಂಡದಲ್ಲಿರುವ ಏಕೈಕ ಸ್ಪಿನ್ನರ್. ಪೀಟರ್ ಸಿಡ್ಲ್ 2010ರ ಬಳಿಕ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ. ಕೀಪರ್-ಬ್ಯಾಟ್ಸ್ ಮನ್ ಅಲೆಕ್ಸ್ ಕಾರೆ ಮೊದಲ ಬಾರಿ ನಾಯಕ ಆ್ಯರೊನ್ ಫಿಂಚ್‌ರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ. ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್ ಹಾಗೂ ಪೀಟರ್ ಹ್ಯಾಂಡ್ಸ್‌ಕಾಂಬ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.

ಆತಿಥೇಯರ ಬ್ಯಾಟಿಂಗ್ ಬಲಿಷ್ಠವಾಗಿದ್ದು ಮಾರ್ಕಸ್ ಸ್ಟೋನಿಸ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 6 ಹಾಗೂ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆಸೀಸ್‌ನ ವೇಗದ ಬೌಲಿಂಗ್ ವಿಭಾಗ ದುರ್ಬಲವಾಗಿ ಕಂಡುಬರುತ್ತಿದ್ದು, ಸಿಡ್ಲ್ 9 ವರ್ಷಗಳ ಬಳಿಕ 50 ಓವರ್ ಪಂದ್ಯದಲ್ಲಿ ಆಡಲಿದ್ದಾರೆ. ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಶನಿವಾರ ಏಕದಿನ ಕ್ರಿಕೆಟ್‌ಗೆ ಕಾಲಿಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News