ಆಸ್ಟ್ರೇಲಿಯ ಓಪನ್: ಪ್ರಧಾನ ಸುತ್ತಿಗೆ ಪ್ರಜ್ಞೇಶ್

Update: 2019-01-11 18:11 GMT

ಮೆಲ್ಬೋರ್ನ್, ಜ.11: ಜಪಾನ್‌ನ ಯೊಸುಕೆ ವಾಟನಕಿ ಅವರ ಸವಾಲನ್ನು ಮೆಟ್ಟಿನಿಂತು 6-7(5), 6-4, 6-4 ಸೆಟ್‌ಗಳಿಂದ ಜಯ ಸಾಧಿಸಿದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯ ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಸುತ್ತಿಗೆ ಚೊಚ್ಚಲ ಪ್ರವೇಶ ಮಾಡಿದ್ದಾರೆ.

ಸೋಮದೇವ್ ದೇವವರ್ಮನ್ ಹಾಗೂ ಯೂಕಿ ಭಾಂಬ್ರಿ ನಂತರ 5 ವರ್ಷಗಳಲ್ಲಿ ಗ್ರಾನ್‌ಸ್ಲಾಮ್‌ವೊಂದರ ಪ್ರಧಾನ ಸುತ್ತಿಗೆ ಪ್ರವೇಶ ಪಡೆದ ಮೂರನೇ ಭಾರತೀಯ ಆಟಗಾರನಾಗಿದ್ದಾರೆ ಪ್ರಜ್ಞೇಶ್. 2018ರಲ್ಲಿ ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್‌ಗಳಲ್ಲಿ ಭಾಗವಹಿಸಿದ್ದ ಯೂಕಿ, ಮೊಣಕಾಲು ನೋವಿನ ಕಾರಣ ಋತುವನ್ನು ಅರ್ಧದಲ್ಲೇ ಮುಗಿಸಿದ್ದರು. 2013ರಲ್ಲಿ ಯುಎಸ್ ಓಪನ್‌ನಲ್ಲಿ ತಮ್ಮ ಕೊನೆಯ ಪಂದ್ಯವಾಡಿದ್ದ ಸೋಮ್‌ದೇವ್ ಸದ್ಯ ನಿವೃತ್ತರಾಗಿದ್ದಾರೆ. ‘‘ನಾನು ಗ್ರಾನ್‌ಸ್ಲಾಮ್‌ವೊಂದರ ಪ್ರಧಾನ ಸುತ್ತಿಗೆ ಪ್ರವೇಶಿಸುವ ಕನಸು ಕಂಡಿದ್ದೆ. ಕನಸು ನನಸಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ವರ್ಣಿಸಲು ಪದಗಳೇ ಸಾಲುತ್ತಿಲ್ಲ. ಈ ಸಾಧನೆ ಮಾಡಲು ನಾನು ಪಟ್ಟ ಶ್ರಮದ ಬಗ್ಗೆ ಹೆಮ್ಮೆ ಇದೆ. ಸಾಧನೆ ತುಂಬಾ ತಡವಾಗಿ ಬಂದಿದೆ. ಸದ್ಯಕ್ಕೆ ವಿರಾಮ ತೆಗೆದುಕೊಂಡು ಪ್ರಧಾನ ಸುತ್ತಿನ ಪಂದ್ಯಗಳಿಗೆ ಸಿದ್ಧನಾಗುವೆ’’ ಎಂದು ಪಂದ್ಯದ ನಂತರ ಪ್ರಜ್ಞೇಶ್ ಹೇಳಿದರು. ಮೂರು ಅರ್ಹತಾ ಸುತ್ತುಗಳಲ್ಲಿ ಜಯಿಸಿದ ಹಿನ್ನೆಲೆಯಲ್ಲಿ ಪ್ರಜ್ಞೇಶ್‌ಗೆ ಈಗಾಗಲೇ 20 ಲಕ್ಷ ರೂ. ಕೈ ಸೇರಿದ್ದು, ಪ್ರಧಾನ ಸುತ್ತಿಗೆ ಪ್ರವೇಶ ಪಡೆದ ಬಹುಮಾನ ಮೊತ್ತವಾಗಿ ಇನ್ನೂ 38 ಲಕ್ಷ ರೂ. ಬರಲಿದೆ. ಇದು 2019ರಲ್ಲಿ ಅವರು ಆಡುವ ಟೂರ್ನಿಗಳ ಪ್ರಮುಖ ಖರ್ಚು , ವೆಚ್ಚ ನಿಭಾಯಿಸಲು ಅನುಕೂಲವಾಗುತ್ತದೆ.

ಆಸ್ಟ್ರೇಲಿಯ ಓಪನ್ ಪ್ರಧಾನ ಸುತ್ತಿನಲ್ಲಿ ಪ್ರಜ್ಞೇಶ್ ತಮ್ಮ ಮೊದಲ ಪಂದ್ಯದಲ್ಲಿ ವಿಶ್ವ ನಂ.39 ಅಮೆರಿಕದ ಫ್ರಾನ್ಸೆಸ್ ತೈಫೊಯ್‌ರನ್ನು ಎದುರಿಸಲಿದ್ದು, ಇಲ್ಲಿ ಯಶಸ್ಸು ಸಾಧಿಸಿದರೆ 5ನೇ ಶ್ರೇಯಾಂಕದ, ವಿಂಬಲ್ಡನ್ ಫೈನಲಿಸ್ಟ್ ಕೆವಿನ್ ಆ್ಯಂಡರ್ಸನ್‌ರನ್ನು ಎದುರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News