ಬವ್ಲೀನ್ ಗೆ 5 ಪದಕ

Update: 2019-01-11 18:17 GMT

ಪುಣೆ, ಜ.11: ಜಮ್ಮು-ಕಾಶ್ಮೀರದ ಉದಯೋನ್ಮುಖ ಜಿಮ್ನಾಸ್ಟಿಕ್ ತಾರೆ ಬವ್ಲೀನ್ ಕೌರ್ ಗುರುವಾರ ತಡರಾತ್ರಿ ನಡೆದ ಖೇಲೊ ಇಂಡಿಯಾ ಜಿಮ್ನಾಸ್ಟಿಕ್ ಸ್ಪರ್ಧೆಗಳಲ್ಲಿ ಮೂರು ಬಂಗಾರ ಹಾಗೂ ಎರಡು ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಮುಂದಿನ ವಾರ 16ನೇ ವಯಸ್ಸಿಗೆ ಕಾಲಿಡಲಿರುವ ಬಲ್ವೀನ್, 2008ರ ಖೇಲೊ ಇಂಡಿಯ ಶಾಲಾ ಗೇಮ್ಸ್‌ನಲ್ಲಿ ನಾಲ್ಕು ಪದಕಗಳನ್ನು ಬಾಚಿಕೊಂಡಿದ್ದರು.

ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ಜಮ್ಮು ಕಾಶ್ಮೀರ ರಾಜ್ಯ ಒಟ್ಟು 6 ಪದಕಗಳನ್ನು ಗೆದ್ದಿದ್ದು, ಅವುಗಳಲ್ಲಿ 5 ಪದಕಗಳು ಬವ್ಲೀನ್ ಅವರ ಕೊಡುಗೆ.

ಕೃಪಾಲ್ ಪಟೇಲ್ ಸಿಂಗ್ ಹಾಗೂ ಎಸ್.ಪಿ. ಸಿಂಗ್ ಗರಡಿಯಲ್ಲಿ ಪಳಗಿರುವ ಬವ್ಲೀನ್, ತಾನು ಕ್ರೀಡಾಕೂಟದಲ್ಲಿ ಭಾಗವಹಿಸುವುದು ತನ್ನ ಕೋಚ್‌ಗಳ ಶ್ರಮಕ್ಕೆ ತಕ್ಕ ಬೆಲೆ ದೊರಕಿಸುವುದಕ್ಕಾಗಿ ಎಂದು ಹೇಳಿದ್ದಾರೆ.

’’ಜಮ್ಮು ಕಾಶ್ಮೀರ ರಾಜ್ಯದಲ್ಲಿ ಅಗತ್ಯ ಸೌಲಭ್ಯಗಳು ಹಾಗೂ ಕ್ರೀಡಾ ಉಪಕರಣಗಳ ಕೊರತೆಯ ಮಧ್ಯೆಯೂ ನನ್ನ ವೃತ್ತಿ ಕ್ರೀಡಾಜೀವನದ ಬೆಳವಣಿಗೆಯಲ್ಲಿ ದಣಿವಿಲ್ಲದೆ ದುಡಿಯುತ್ತಿರುವ ನನ್ನ ತರಬೇತುದಾರರು ಈ ಗೆಲುವಿನಿಂದ ಸಂತೋಷಪಟ್ಟರೆ ಅದು ಇನ್ನೂ ವಿಶೇಷವಾದದ್ದು. ನೀನು ಆಟದ ಕಡೆ ಗಮನಹರಿಸು ಮಿಕ್ಕಿದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಅವರು ನನಗೆ ಯಾವಾಗಲೂ ಹೇಳುತ್ತಾರೆ’’ಎಂದು ಬವ್ಲೀನ್ ನುಡಿದರು.

ಎಲ್ಲ ಕ್ರೀಡಾಪಟುಗಳಂತೆ ಭಾರತವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮಹದಾಸೆ ಇಟ್ಟುಕೊಂಡಿದ್ದಾರೆ ಬವ್ಲೀನ್ ಕೌರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News