ಮುಂಡ್ಕೂರು: ಸೇತುವೆಯಿಂದ ಹೊಳೆಗೆ ಉರುಳಿದ ಜೀಪ್; ಮಹಿಳೆ ಮೃತ್ಯು

Update: 2019-01-12 07:04 GMT

ಕಾರ್ಕಳ, ಜ.12: ಮುಂಡ್ಕೂರು ಸಮೀಪದ ಜಾರಿಗೆಕಟ್ಟೆ ಎಂಬಲ್ಲಿ ಇಂದು ಬೆಳಗ್ಗೆ ಸೇತುವೆಯಿಂದ ಬೊಲೇರೊ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಶಾಂಭವಿ ಹೊಳೆಗೆ ಉರುಳಿ ಬಿದ್ದು ನೀರಿನಲ್ಲಿ ಮುಳುಗಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಕಾರ್ಕಳ ಬೋಳ ನಿವಾಸಿ ಡಯನಾ(44) ಎಂದು ಗುರುತಿಸಲಾಗಿದೆ. ಜೀಪಿನಲ್ಲಿದ್ದ ಮೃತರ ಪತಿ ಸ್ಟಾನಿ(48), ಮಕ್ಕಳಾದ ಶೆಲ್ಡೋನ್(19) ಹಾಗೂ ಶರೋನ್(19) ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಇವರು ನಾಲ್ವರು ಜೀಪಿನಲ್ಲಿ ಮಂಗಳೂರಿನ ವಿವಾಹ ಸಮಾರಂಭವೊಂದಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಲಾರಿಯು ಜೀಪಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸ್ಟಾನಿ ಜೀಪನ್ನು ಎಡಕ್ಕೆ ತಿರುಗಿಸಿದ್ದಾರೆ. ಇದರಿಂದ ನಿಯಂತ್ರಣ ತಪ್ಪಿದ ಜೀಪ್ ಶಾಂಭವಿ ಹೊಳೆಗೆ ಬಿತ್ತೆನ್ನಲಾಗಿದೆ.

ಇದರಿಂದ ಜೀಪ್ ನೀರಿನಲ್ಲಿ ಮುಳುಗಿದ್ದು ಸ್ಥಳೀಯರು ಕೂಡಲೇ ನೀರಿಗೆ ಹಾರಿ ಜೀಪಿನಲ್ಲಿದ್ದ ಮೂವರನ್ನು ಜೀಪಿನಿಂದ ಹೊರತಂದು ಮೇಲಕ್ಕೆತ್ತಿದ್ದು. ಆದರೆ ಸೀಟ್ ಬೆಲ್ಟ್ ಧರಿಸಿದ್ದ ಡಯನಾರನ್ನು ಡೋರ್ ಲಾಕ್ ಆಗಿದ್ದ ಪರಿಣಾಮ ಜೀಪಿನಿಂದ ಹೊರತೆಗೆದು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಬಳಿಕ ನೀರಿನಿಂದ ಜೀಪನ್ನು ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಮೇಲೆತ್ತಲಾಯಿತು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News