ವಿವೇಕಾನಂದರು ಜಾತೀಯತೆ, ಅಸ್ಪೃಶ್ಯತೆಯ ವಿರೋಧಿಯಾಗಿದ್ದರು: ಡಾ.ವಸಂತ ಕುಮಾರ್

Update: 2019-01-12 09:05 GMT

ಪುತ್ತೂರು, ಜ.12: ಸ್ವಾಮಿ ವಿವೇಕಾನಂದರು ‘ದರಿದ್ರ ನಾರಾಯಣ ದೇವೋಭವ’ ಎಂಬ ಕಲ್ಪನೆಯನ್ನು ಜಾಗತಿಕವಾಗಿ ಒಡಮೂಡಿಸಿದವರು. ಸಮಾಜದ ಜಾತೀಯತೆ, ಅಸ್ಪಶ್ಯತೆ, ಒಡಕುಗಳು ದೂರವಾಗಬೇಕೆಂಬ ತಾಯಿತನದ ಮನಸ್ಸನ್ನು ಹೊಂದಿದ್ದ ಅವರು ಪಾಶ್ಚಾತ್ಯ ದೇಶಗಳ ತಂತ್ರಜ್ಞಾನ ವಿಜ್ಞಾನದೊಂದಿಗೆ ಭಾರತೀಯ ಆಧ್ಯಾತ್ಮ ಸೇರಿದಾಗ ಅದ್ಭುತ ಬೆಳವಣಿಗೆ ಸಾಧ್ಯ ಎಂಬುದನ್ನು ಮನಗಂಡಿದ್ದರು ಎಂದು ಮೈಸೂರಿನ ಮಹಾರಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಹೇಳಿದ್ದಾರೆ.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶನಿವಾರ ಆಂೋಜಿಸಲಾದ ವಿವೇಕಾನಂದ ಜಯಂತಿ-2019 ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.

ಪ್ರಪಂಚದ ಬೇರೆ ಬೇರೆ ಧರ್ಮ ಸಿದ್ಧಾಂತಗಳು ಮನುಷ್ಯ ಒಬ್ಬ ಪಾಪಿ, ಆತ ಒಬ್ಬ ಆರ್ಥಿಕ ಪ್ರಾಣಿ, ರಾಜಕೀಯ ಪ್ರಾಣಿ ಎಂದು ಗುರುತಿಸಿರುವಾಗ ಮನುಷ್ಯ ಅಮೃತಪುತ್ರ ಎಂಬ ಉಪನಿಷತ್ತಿನ ತತ್ವವನ್ನು ಸಾರಿದ ವಿವೇಕಾನಂದರು ಪ್ರತಿಯೊಬ್ಬ ಮನುಷ್ಯ ಆಧ್ಮಾತ್ಮಿಯಾದಾಗ ಮಾತ್ರ ಆತ್ಮಕಲ್ಯಾಣ ಸಾಧ್ಯ ಎಂದು ನುಡಿದವರು. ವಿವೇಕಾನಂದರು ಕೇವಲ ಹಿಂದೂ ಧರ್ಮಕ್ಕೆ ಅಥವ ಭಾರತಕ್ಕೆ ಸೀಮಿತರಲ್ಲ, ಬದಲಾಗಿ ವಿಶ್ವದರ್ಮಕ್ಕೆ ಸೇರಿದವರು. ಈ ಕಾರಣಕ್ಕಾಗಿಯೇ ವಿವೇಕಾನಂದರನ್ನು ಜಗತ್ತೇ ಆರಾಧಿಸುತ್ತದೆ. ಆದರೆ ದುರಂತವೆಂದರೆ ಇಂತಹ ಪುಣ್ಯಪುರುಷನ ಜನ್ಮೂಮಿಯಲ್ಲಿ ಇಂದು ಅಂಕ ಆಧಾರಿತ ಶಿಕ್ಷಣ ಹಾಗೂ ದುಡ್ಡಿನ ಆಧಾರಿತ ಉದ್ಯೋಗವನ್ನು ಪಡೆಯುವ ದಾರಿಯನ್ನು ತೋರಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ವಿವಿಧ ವಿವೇಕಾನಂದ ಸಂಸ್ಥೆಗಳ ಆಡಳಿತ ಮಂಡಳಿಯ ಹಿರಿಯರು, ಪ್ರಾಚಾರ್ಯರು, ಉಪನ್ಯಾಸಕ ವೃಂದ, ಬೋಧಕೇತರ ವೃಂದ ಹಾಗೂ ಸುಮಾರು ಎಂಟು ಸಾವಿರದಷ್ಟು ವಿದ್ಯಾರ್ಥಿಗಳು ಮತ್ತು ಆರುನೂರಕ್ಕೂ ಮಿಕ್ಕ ಆಹ್ವಾನಿತರು ಉಪಸ್ಥಿತರಿದ್ದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ.ಸುಧಾ ರಾವ್ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಸುರೇಂದ್ರ ಕಿಣಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News