10 ಶೇ. ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ಅಂಕಿತ

Update: 2019-01-12 17:53 GMT

ಹೊಸದಿಲ್ಲಿ,ಜ.12: ಮೇಲ್ಜಾತಿಗಳು ಆರ್ಥಿಕವಾಗಿ ದುರ್ಬಲರಿಗೆ ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ಮೀಸಲಾತಿಯನ್ನು ಒದಗಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ಅಂಕಿತ ಹಾಕಿದ್ದು,ಅದೀಗ ಶಾಸನವಾಗಿದೆ. ಸಂಸತ್ತು ಈ ವಾರ ಮಸೂದೆಯನ್ನು ಅಂಗೀಕರಿಸಿತ್ತು.

ತೀವ್ರ ನಿರುದ್ಯೋಗದ ನಡುವೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿಯನ್ನು ಒದಗಿಸುವ ಕ್ರಮವು ಚುನಾವಣಾ ತಂತ್ರವಾಗಿದೆ ಎಂಬ ಪ್ರತಿಪಕ್ಷಗಳ ಟೀಕೆಗಳ ಮಧ್ಯೆಯೇ ಸರಕಾರವು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ ಸಾರ್ವತ್ರಿಕ ಚುನಾವಣೆಗಳು ಸನ್ನಿಹಿತವಾಗಿರುತ್ತಿರುವ ಈ ಸಂದರ್ಭದಲ್ಲಿ ಮಸೂದೆಯನ್ನು ನೇರವಾಗಿ ವಿರೋಧಿಸಲು ಪ್ರಮುಖ ರಾಜಕೀಯ ಪಕ್ಷಗಳು ಹಿಂಜರಿದಿದ್ದವು.

ಸ್ವತಂತ್ರ ಚಿಂತನ ಚಾವಡಿ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ’ಯ ದತ್ತಾಂಶಗಳು ಭಾರತದಲ್ಲಿ ಕಳೆದ ತಿಂಗಳು ನಿರುದ್ಯೋಗದ ಪ್ರಮಾಣವು 15 ತಿಂಗಳುಗಳಲ್ಲಿ ಅತ್ಯಂತ ಹೆಚ್ಚಿನ ಏರಿಕೆ ಕಂಡಿದೆ ಎಂದು ತೋರಿಸಿದ್ದು,ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಅಧಿಕಾರವನ್ನುಳಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಕ್ಕೆ ಎದುರಾಗಿರುವ ಸವಾಲನ್ನು ಒತ್ತಿ ಹೇಳಿವೆ.

ಮೂರು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸೋಲಿನ ಬಳಿಕ ಸಂವಿಧಾನಕ್ಕೆ ತಂದಿರುವ ಹೊಸ ತಿದ್ದುಪಡಿಯಡಿ ವಾರ್ಷಿಕ ಎಂಟು ಲ.ರೂ.ಗಿಂತ ಕಡಿಮೆ ಆದಾಯ ಮತ್ತು ಐದು ಎಕರೆಗಳಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು ಸರಕಾರಿ ಉದ್ಯೋಗಗಳಲ್ಲಿ ಮತ್ತು ಸರಕಾರಿ ಕಾಲೇಜುಗಳಲ್ಲಿ ಮೀಸಲಾತಿಗೆ ಅರ್ಹರಾಗಿದ್ದಾರೆ.

ಭಾರತದಲ್ಲಿ ಸಾಮಾಜಿಕವಾಗಿ ಕೆಳವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಈಗಾಗಲೇ ಮೀಸಲಾತಿಯಿದ್ದರೂ, ಇದೇ ಮೊದಲ ಬಾರಿಗೆ ಮೇಲ್ಜಾತಿಗಳ ಹಿಂದುಗಳು ಮತ್ತು ಇತರ ಧರ್ಮಗಳ ಜನರಿಗೆ ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News