ಗುಂಡಿಕ್ಕಿ ಕಾನ್‌ಸ್ಟೇಬಲ್ ನ್ನು ಹತ್ಯೆಗೈದ ದುಷ್ಕರ್ಮಿಗಳು

Update: 2019-01-12 14:11 GMT

ಲಕ್ನೊ, ಜ.12: ಉತ್ತರಪ್ರದೇಶದ ಮೀರತ್‌ನಲ್ಲಿ ಶುಕ್ರವಾರ ಅಪರಿಚಿತ ದುಷ್ಕರ್ಮಿಗಳು 26 ವರ್ಷದ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಪೊಲೀಸ್ ಕಾನ್‌ಸ್ಟೇಬಲ್ ಅಂಕುರ್ ಚೌಧರಿ ಶಾಮ್ಲಿ ಗ್ರಾಮದ ನಿವಾಸಿ.

ಇವರು ಶುಕ್ರವಾರ ಮುಂಜಾನೆ ತನ್ನ ಎರಡು ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೊರತೆರಳಿದವರು 7:30 ರವರೆಗೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಅವರ ಸಹೋದರ ತಮಗೆ ಕರೆ ಮಾಡಿ ತಿಳಿಸಿದ್ದಾನೆ. ತಕ್ಷಣ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮೃತದೇಹವನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಫಲಾವ್ದ ಪೊಲೀಸ್ ಠಾಣಾಧಿಕಾರಿ ಕರ್ತಾರ್ ಸಿಂಗ್ ತಿಳಿಸಿದ್ದಾರೆ.

ಅಂಕುರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಷರಾ ಬರೆದಿಟ್ಟು ಪ್ರಕರಣವನ್ನು ಮುಗಿಸಿಬಿಡಲು ಪೊಲೀಸರು ನಿರ್ಧರಿಸಿದ್ದರು. ಆದರೆ ಅಂಕುರ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಘಟನಾ ಸ್ಥಳದಲ್ಲಿ ಕಾರ್ಟ್ರಿಡ್ಜ್‌ಗಳು ಪತ್ತೆಯಾಗಿವೆ. ಬಳಿಕ ನಾವು ಪ್ರತಿಭಟನೆ ನಡೆಸಿದ್ದ ಕಾರಣ ಎಫ್‌ಐಆರ್ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಮೃತನ ಸಹೋದರ ಅನುಜ್ ಚೌಧರಿ ಹೇಳಿದ್ದಾರೆ.

ಮರಣೋತ್ತರ ವರದಿ ಕೈಸೇರಿದ ಬಳಿಕ ಎಫ್‌ಐಆರ್ ದಾಖಲಿಸಲಾಗುವುದು. ಆದರೆ ಅಂಕುರ್ ಕುಟುಂಬದವರ ಪ್ರತಿಭಟನೆಯ ಕಾರಣ ಮರಣೋತ್ತರ ಪರೀಕ್ಷೆ ವಿಳಂಬವಾಗಿದೆ ಎಂದು ಪೊಲೀಸ್ ಅಧಿಕಾರಿ ಕರ್ತಾರ್ ಸಿಂಗ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿದ್ದ ದೇಶೀ ನಿರ್ಮಿತ ಪಿಸ್ತೂಲ್, ಐದು ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News