ಉಡುಪಿ: ಶನಿವಾರ ಇನ್ನೂ ಏಳು ಮಂಗಗಳ ಶವ ಪತ್ತೆ

Update: 2019-01-12 16:29 GMT

ಉಡುಪಿ, ಜ.12: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ವರದಿಯಾದ ಬಳಿಕ ಪಕ್ಕದ ಉಡುಪಿ ಜಿಲ್ಲೆಯಲ್ಲೂ ಮಂಗಗಳ ಸಾವು ವರದಿಯಾಗುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶನಿವಾರ ಒಂದೇ ದಿನದಲ್ಲಿ ಏಳು ಮಂಗಗಳ ಶವ ಪತ್ತೆಯಾಗಿವೆ.

ಇವುಗಳಲ್ಲಿ ನಾಲ್ಕು ಮಂಗಗಳ ದೇಹದ ಪೋಸ್ಟ್‌ಮಾರ್ಟಂ ನಡೆಸಿ ವಿಸೇರಾವನ್ನು ಶಿಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.

ಶುಕ್ರವಾರ ಮಂಗನ ಶವಗಳು ಪತ್ತೆಯಾದ ಕುಂದಾಪುರ ತಾಲೂಕಿನ ಬೆಳ್ವೆ, ಕಂಡ್ಲೂರು ಹಾಗೂ ಕೂರ್ಗಿಯಲ್ಲಿ ಇಂದು ಮೂರು ಶವಗಳು ಪತ್ತೆಯಾಗಿವೆ. ಅಲ್ಲದೇ ಬೈಂದೂರಿನ ಗಂಗನಾಡು, ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಹಾಗೂ ಬ್ರಹ್ಮಾವರ ಸಮೀಪದ ಹೇರೂರಿನಲ್ಲೂ ಮಂಗಗಳ ಮೃತ ದೇಹಗಳು ಪತ್ತೆಯಾಗಿವೆ ಎಂದವರು ಹೇಳಿದರು. ಸಂಜೆ ವೇಳೆಗೆ ಇನ್ನೊಂದು ಮಂಗನ ಶವ ಬೆಳ್ವೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಇವುಗಳಲ್ಲಿ ಬೆಳ್ವೆ, ಕಂಡ್ಲೂರು, ಗಂಗನಾಡು ಹಾಗೂ ಹೇರೂರಿನ ಮಂಗಗಳ ದೇಹದ ಪೋಸ್ಟ್ ಮಾರ್ಟಂ ಮಾಡಲಾಗಿದ್ದು, ಅವುಗಳನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಉಳಿದೆರಡು ಮಂಗಗಳ ದೇಹಗಳು ಕೊಳೆತು ಹೋಗಿರುವುದರಿಂದ ಅವುಗಳ ಪೋಸ್ಟ್‌ಮಾರ್ಟಂ ನಡೆಸಲು ಸಾಧ್ಯವಾಗಿಲ್ಲ ಎಂದವರು ಹೇಳಿದರು.

ಡಿಎಂಪಿ ತೈಲ ರವಾನೆ: ಕುಂದಾಪುರ ವ್ಯಾಪ್ತಿಯಲ್ಲಿ ಇಂದು ಐದು ಮಂಗಗಳ ಶವ ಪತ್ತೆಯಾಗಿದ್ದು, ಇವುಗಳಲ್ಲಿ ಮೂರರ ಪೋಸ್ಟ್ ಮಾರ್ಟಂ ನಡೆಸಿ ಅವುಗಳನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಒಂದು ಸಂಪೂರ್ಣ ಕೊಳೆತಿದ್ದು, ಬೆಳ್ವೆಯಲ್ಲಿ ಸಂಜೆ ದೊರೆತ ಮತ್ತೊಂದು ಮಂಗದ ಪೋರ್ಸ್ಟ್‌ಮಾರ್ಟಂನ್ನು ನಡೆಸಲಾಗಿದ್ದು, ಅದನ್ನು ಶಿವಮೊಗ್ಗಕ್ಕೆ ಕಳುಹಿಸಲಾಗುವುದು ಎಂದು ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಮಂಗನ ಕಾಯಿಲೆ (ಕೆಎಫ್‌ಡಿ) ರೋಗ ಹರಡದಂತೆ ತಡೆಯಲು ಬಳಸುವ ಡಿಎಂಪಿ ತೈಲದ 180 ಬಾಟಲಿಗಳನ್ನು ಈಗಾಗಲೇ ಸತ್ತ ಮಂಗಗಳು ಪತ್ತೆಯಾಗಿರುವ ವ್ಯಾಪ್ತಿಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಸೋಮವಾರದಂದು ಇನ್ನೂ 1000 ಡಿಎಂಪಿ ತೈಲದ ಬಾಟಲಿ ಬರಲಿದ್ದು, ಅವುಗಳನ್ನು ಇನ್ನಷ್ಟು ಪಿಎಚ್‌ಸಿಗಳಿಗೆ ಹಾಗೂ ಅರಣ್ಯ ಇಲಾಖೆಗಳಿಗೆ ಕಳುಹಿಸಲಾಗುವುದು ಎಂದವರು ಹೇಳಿದರು.

ಅರಣ್ಯ ಪ್ರದೇಶಗಳಿಗೆ ತೆರಳುವವರು ಮುಂಜಾಗ್ರತಾ ಕ್ರಮವಾಗಿ ಡಿಎಂಪಿ ತೈಲವನ್ನು ಬಳಸುವಂತೆ ಸೂಚಿಸಲಾಗಿದೆ. ಅಲ್ಲದೇ ನಿನ್ನೆ ಕುಂದಾಪುರ ತಾಪಂನಲ್ಲಿ ಸಂಬಂಧಿತ ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಭೆ ನಡೆಸಿದ್ದು, ಅವರಿಗೆ ಮಂಗನ ಕಾಯಿಲೆಯ ಕುರಿತು ಸಂಪೂರ್ಣ ಮಾಹಿತಿ, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವರಿಸಲಾಗಿದೆ ಎಂದು ಉಡುಪ ಹೇಳಿದರು.

ಪ್ರತಿ ಗ್ರಾಪಂ ಮಟ್ಟದಲ್ಲಿ ಜನಜಾಗೃತಿ ಹಾಗೂ ಪರಿಸ್ಥಿತಿಯ ಅವಲೋಕನ ಕ್ಕಾಗಿ ಗ್ರಾಮ ಸಮಿತಿಗಳನ್ನು ರಚಿಸಲಾಗುತ್ತಿದೆ. ಇವುಗಳಲ್ಲಿ ಪಿಎಚ್‌ಸಿಯ ವೈದ್ಯಾಧಿಕಾರಿ, ಪಿಡಿಒ, ಅಲ್ಲಿನ ಪಶುವೈದ್ಯಾಧಿಕಾರಿ, ಅರಣ್ಯ ಇಲಾಖೆ ಸಿಬ್ಬಂದಿ, ಜನಪ್ರತಿನಿಧಿಗಳು ಮುಂತಾದವರಿರುತ್ತಾರೆ. ಅಲ್ಲದೇ ಜನರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರು ಹಾಗೂ ಇತರ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ. ಸತ್ತ ಮಂಗಗಳು ಪತ್ತೆಯಾದ ಪ್ರದೇಶಗಳ ಆಸುಪಾಸಿನಲ್ಲಿ ವರದಿಯಾಗುವ ಜ್ವರ ಪ್ರಕರಣಗಳನ್ನು ಇವರು ಪಿಎಚ್‌ಸಿಗಳ ಗಮನಕ್ಕೆ ತರುತ್ತಾರೆ. ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲೂ ದಾಖಲಾಗುವ ಜ್ವರ ಪ್ರಕರಣಗಳ ಮಾಹಿತಿಯನ್ನು ಪ್ರತಿದಿನ ನೀಡುವಂತೆ ಸಂಬಂಧಿತ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಉಡುಪ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News