‘ದೃಶ್ಯಂ’ ಸಿನೆಮದ ಪ್ರೇರಣೆಯಿಂದ ಮಹಿಳೆಯ ಕೊಲೆ: ಬಿಜೆಪಿ ಮುಖಂಡ, ಮೂವರು ಪುತ್ರರ ಬಂಧನ

Update: 2019-01-12 16:57 GMT

 ಇಂದೋರ್, ಜ.12: ಹಿಂದಿ ಸಿನೆಮ ‘ದೃಶ್ಯಂ’ನಿಂದ ಪ್ರೇರೇಪಿತರಾಗಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ ಆರೋಪದಲ್ಲಿ ಮಧ್ಯಪ್ರದೇಶದ ಬಿಜೆಪಿ ಮುಖಂಡ, ಆತನ ಮೂವರು ಪುತ್ರರ ಸಹಿತ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 ಟ್ವಿಂಕಲ್ ದಾಗ್ರೆ (22 ವರ್ಷ) ಎಂಬ ಮಹಿಳೆ ಎರಡು ವರ್ಷದ ಹಿಂದೆ ಕೊಲೆಯಾದ ಪ್ರಕರಣದಲ್ಲಿ ಬಿಜೆಪಿ ಮುಖಂಡ ಜಗದೀಶ್ ಕರೋಟಿಯಾ ಅಲಿಯಾಸ್ ಕಲ್ಲು ಪಹಲ್ವಾನ್(65 ವರ್ಷ), ಆತನ ಮೂವರು ಪುತ್ರರಾದ ಅಜಯ್(36 ವರ್ಷ), ವಿಜಯ್ (38 ವರ್ಷ), ವಿನಯ್ (31 ವರ್ಷ) ಹಾಗೂ ಸಹಚರ ನೀಲೇಶ್ ಕಶ್ಯಪ್(28 ವರ್ಷ)ನನ್ನು ಬಂಧಿಸಲಾಗಿದೆ ಎಂದು ಇಂದೋರ್ ಡಿಐಜಿ ಹರಿನಾರಾಯಣಾಚಾರಿ ಮಿಶ್ರ ತಿಳಿಸಿದ್ದಾರೆ.

ಜಗದೀಶ್ ಕರೋಟಿಯಾ ಮತ್ತು ಟ್ವಿಂಕಲ್ ದಾಗ್ರೆ ಮಧ್ಯೆ ಅನೈತಿಕ ಸಂಬಂಧವಿತ್ತು. ಜಗದೀಶ್ ಕರೋಟಿಯಾನ ಮನೆಯಲ್ಲೇ ವಾಸ್ತವ್ಯ ಹೂಡಲು ಟ್ವಿಂಕಲ್ ಹಠ ಹಿಡಿದಾಗ ಕರೋಟಿಯಾನ ಕುಟುಂಬದಲ್ಲಿ ಸಮಸ್ಯೆ ಎದುರಾಗಿದೆ. ಆಗ ‘ದೃಶ್ಯಂ ’ಸಿನೆಮದ ಪ್ರೇರಣೆಯಂತೆ ಟ್ವಿಂಕಲ್ ದಾಗ್ರೆಯನ್ನು ಕೊಲೆಗೈದ ಆರೋಪಿಗಳು ಆಕೆಯ ದೇಹವನ್ನು ಸುಟ್ಟು ಹಾಕಿದ್ದರು. ಈ ಬಗ್ಗೆ ಯಾರಿಗೂ ಸಂಶಯ ಬಾರದಂತೆ, ಹೆಣ ಸುಟ್ಟ ಪ್ರದೇಶದ ಸನಿಹದಲ್ಲೇ ನಾಯಿಯೊಂದರ ಶವವನ್ನು ಹೂತುಹಾಕಿದ್ದರು ಮತ್ತು ಯಾರೋ ವ್ಯಕ್ತಿಯೊಬ್ಬನನ್ನು ಕೊಂದು ಇಲ್ಲಿ ಹೂತು ಹಾಕಿದ್ದಾರೆ ಎಂದು ಪುಕಾರು ಎಬ್ಬಿಸಿದ್ದರು. ಅದರಂತೆ ಸ್ಥಳದಲ್ಲಿ ಶೋಧನೆ ನಡೆಸಿದ್ದ ಪೊಲೀಸರಿಗೆ ಅಲ್ಲಿ ನಾಯಿಯ ಮೃತದೇಹ ದೊರೆತಿತ್ತು. ಇದು ಪೊಲೀಸರ ತನಿಖೆಯ ದಾರಿ ತಪ್ಪಿಸಿತ್ತು ಎಂದು ಡಿಐಜಿ ತಿಳಿಸಿದ್ದಾರೆ.

ಕೆಲ ಸಮಯದ ಬಳಿಕ ಮಹಿಳೆಯ ದೇಹವನ್ನು ಸುಟ್ಟ ಸ್ಥಳದಲ್ಲಿ ಬ್ರೇಸ್‌ಲೆಟ್ ಹಾಗೂ ಇತರ ಕೆಲವು ಆಭರಣಗಳು ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಮೆದುಳಚ್ಚು ಪರೀಕ್ಷೆ(ಬ್ರೈನ್ ಫಿಂಗರ್‌ಪ್ರಿಂಟಿಂಗ್) ಮೂಲಕ ಆರೋಪಿಗಳ ವಿಚಾರಣೆ ನಡೆಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಡಿಐಜಿ ತಿಳಿಸಿದ್ದಾರೆ.

   ಈ ಮಧ್ಯೆ, ಬಿಜೆಪಿಯ ಮಾಜಿ ಶಾಸಕನೊಬ್ಬನ ಪ್ರಭಾವದಿಂದಾಗಿ ಕಠೋರಿಯಾನನ್ನು ಈ ಪ್ರಕರಣದಲ್ಲಿ ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹತ ಮಹಿಳೆಯ ಸಂಬಂಧಿಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News