ಇಂಡಿಯನ್ ರೋವರ್ಸ್‌ ಚಾಲೆಂಜ್ ಸ್ಪರ್ಧೆ: ಐಐಟಿ ಮದ್ರಾಸ್‌ನ 'ಅನ್ವೇಷಕ್‌'ಗೆ ಅಗ್ರಪ್ರಶಸ್ತಿ

Update: 2019-01-13 15:00 GMT

ಮಣಿಪಾಲ, ಜ.13: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವತಿಯಿಂದ ಎಂಐಟಿ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಇಂಡಿಯನ್ ರೋವರ್ಸ್‌ ಚಾಲೆಂಜ್ ಸ್ಪರ್ಧೆಯಲ್ಲಿ ಐಐಟಿ ಮದ್ರಾಸ್‌ನ ಅನ್ವೇಷಕ್‌ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ಮೂರನೇ ದಿನದ ಅಂತಿಮ ಸುತ್ತಿನ ಸ್ಪರ್ಧೆಗಳು ಪ್ರಾರಂಭಗೊಂಡಾದ ಅಗ್ರಸ್ಥಾನದಲ್ಲಿದ್ದ ಐಐಟಿ ಮದ್ರಾಸ್ ತಂಡ, ಮೂರನೇ ಸುತ್ತಿನಲ್ಲೂ ತನ್ನ ಪ್ರಾಬಲ್ಯವನ್ನು ಮುಂದುವರಿಸಿ ಅಂತಿಮವಾಗಿ ಅಗ್ರಸ್ಥಾನದಲ್ಲೇ ಸ್ಪರ್ಧೆಯನ್ನು ಮುಗಿಸಿತು.

ಪೊಲಂಡ್‌ನ ಎಜಿಎಚ್ ಯುನಿವರ್ಸಿಟಿ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿಯ ಎಜಿಎಚ್ ಸ್ಪೇಸ್ ಸಿಸ್ಟಮ್ ತಂಡ ಎರಡನೇ ಸ್ಥಾನದೊಂದಿಗೆ ರನ್ನರ್ ಅಪ್ ಆಗಿ ಸ್ಪರ್ಧೆ ಮುಗಿಸಿದರೆ, ಬಾಂಗ್ಲಾದೇಶದ ಇಸ್ಲಾಮಿಕ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯ ಐಯುಟಿ ಮಾರ್ಸ್‌ ರೋವರ್ ತಂಡ ಮೂರನೇ ಸ್ಥಾನ ಪಡೆಯಿತು.

ಮದ್ರಾಸ್ ಐಐಟಿ ತಂಡ ಅಗ್ರ ಪ್ರಶಸ್ತಿಯೊಂದಿಗೆ 50,000 ರೂ. ನಗದು ಬಹುಮಾನ ಪಡೆದರೆ, ಎಜಿಎಚ್ ಸ್ಪೇಸ್ ಸಿಸ್ಟಮ್ ತಂಡ ರನ್ನರ್‌ ಅಪ್ ಪ್ರಶಸ್ತಿಯೊಂದಿಗೆ 30,000 ರೂ. ಹಾಗೂ ಐಯುಟಿ ಬಾಂಗ್ಲಾದೇಶ ತಂಡ ಮೂರನೇ ಸ್ಥಾನದೊಂದಿಗೆ 20,000ರೂ. ನಗದು ಬಹುಮಾನ ಗೆದ್ದುಕೊಂಡವು.

ಅಮೆರಿಕದ ಮಾರ್ಸ್‌ ಸೊಸೈಟಿಯ ತಾಂತ್ರಿಕ ನಿರ್ದೇಶನದಲ್ಲಿ ನಡೆದ ಇಂಡಿಯನ್ ರೋವರ್ಸ್‌ ಚಾಲೆಂಜ್‌ನ ಎರಡನೇ ಆವೃತ್ತಿಯಲ್ಲಿ ವಿದೇಶಗಳಿಂದ ಐದು ಹಾಗೂ ಐದು ಭಾರತೀಯ ತಂಡಗಳು ಪಾಲ್ಗೊಂಡಿದ್ದು ಆರಂಭದಿಂದಲೂ ತುರುಸಿನ ಸ್ಪರ್ಧೆ ಕಂಡುಬಂದಿತ್ತು.

ಕೊನೆಯ ದಿನದಂದು ಎಲ್ಲಾ ತಂಡಗಳಿಗೂ ಸಾಯನ್ಸ್ ಕ್ಯಾಚಿ ಟಾಸ್ಕ್‌ನ್ನು ನೀಡಲಾಗಿತ್ತು. ಇದರಲ್ಲಿ ಎಲ್ಲಾ ತಂಡಗಳ ರೋವರ್‌ಗಳು ಮೈದಾನದಲ್ಲಿ ನಿರ್ಮಿಸಲಾಗಿದ್ದ ಮಂಗಳ ಗ್ರಹದ ಮೈಮೇಲಿನ ಮಣ್ಣನ್ನು ಸಂಗ್ರಹಿಸಿ ಅದನ್ನು ರೋವರ್ಸ್‌ನಲ್ಲಿರುವ ಉಪಕರಣಗಳ ನೆರವಿನಿಂದ ಪರೀಕ್ಷೆಗೊಳಪಡಿಸಿ ಕೊನೆಯ 15 ನಿಮಿಷಗಳಲ್ಲಿ ಅಲ್ಲಿ ಪತ್ತೆಯಾಗಿರುವುದನ್ನು ವಿಶ್ಲೇಷಿಸಬೇಕಿತ್ತು.

ಈ ಸ್ಪರ್ಧೆಯಲ್ಲಿ ಬಾಂಗ್ಲಾದೇಶದ ಐಯುಟಿ ಮಾರ್ಸ್‌ ರೋವರ್ ಅತೀ ಹೆಚ್ಚು ಅಂಕ ಗಳಿಸಿದರೆ, ಪೊಲಂಡ್‌ನ ಎಜಿಎಚ್ ಸ್ಪೇಸ್ ಸಿಸ್ಟಮ್ ಎರಡನೇ ಹಾಗೂ ಐಐಟಿ ಮದ್ರಾಸ್‌ಮನ ಅನ್ವೇಷಕ್ ಮೂರನೇ ಸ್ಥಾನ ಪಡೆದವು.

ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ಮಂಗಳೂರು ಎಂಆರ್‌ಪಿಎಲ್‌ನ ಜಿಎಂ ಪ್ರಶಾಂತ್ ಬಾಳಿಗಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಹೆಯ ರಿಜಿಸ್ಟ್ರಾರ್ ಡಾ.ವಿನೋದ್ ಥಾಮಸ್ ಹಾಗೂ ಎಂಐಟಿಯ ನಿರ್ದೇಶಕ ಡಾ.ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News