ದಾಖಲೆಯ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾದರಿ: ಸಚಿವ ಖಾದರ್

Update: 2019-01-13 16:46 GMT

ಬೆಳ್ತಂಗಡಿ, ಜ. 13 : ಎಸ್‍ಎಸ್‍ಎಲ್‍ಸಿಯಲ್ಲಿ ಸತತವಾಗಿ ದಾಖಲೆಯ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಜಿಲ್ಲೆಗೇ ಒಂದು ಮಾದರಿ ಕಾರ್ಯಕ್ರಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.

ಅವರು ರವಿವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಸತತ 7ನೇ ಬಾರಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಕರ್ನಾಟಕ ರಾಜ್ಯದ ಏಕೈಕ ಸರ್ಕಾರಿ ಪ್ರೌಢಶಾಲೆ ‘ನಮ್ಮೂರ ಪ್ರೌಢಶಾಲೆ ಗುರುವಾಯನಕೆರೆ’ ಹಾಗೂ 8ನೇ ಬಾರಿ ಶೇ.100 ಫಲಿತಾಂಶ ಪಡೆದ ರಾಜ್ಯದ ಏಕೈಕ ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿರುವ ‘ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ’ ಇಲ್ಲಿನ 2017-2018ನೇ ಸಾಲಿನ ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಉತ್ತಮ ಫಲಿತಾಂಶ ಪಡೆದ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಗೌರವಿಸುವ ಇಂತಹ ಕಾರ್ಯಕ್ರಮ ನಿಜವಾದ ದೇಶಪ್ರೇಮವಾಗಿದೆ ಎಂದ ಅವರು ದೇಶ ಬಲಿಷ್ಠವಾಗಬೇಕಾದರೆ ಸಂಸದ ಅಥವಾ ಶಾಸಕನಿಂದ ಸಾಧ್ಯವಿಲ್ಲ. ತರಗತಿಯ ಒಳಗೆ ವಿದ್ಯಾರ್ಥಿಗಳು ಹೊಂದುವ ಸತ್‍ಚಿಂತನೆಯಿಂದ ಅವರನ್ನು ಸಶಕ್ತರಾಗಿಸುವುದರಿಂದ ಸಾಧ್ಯವಾಗುವುದು. ಶಿಕ್ಷಣ ಪಡೆಯಲು ಬಡತನ ಅಡ್ಡಿ ಬರುವುದಿಲ್ಲ ಎಂಬುದನ್ನೂ ಶೇ.100 ಫಲಿತಾಂಶ ಪಡೆಯುವುದರ ಮೂಲಕ ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯಕ್ಕೇ ತೋರಿಸಿಕೊಟ್ಟಿದ್ದಾರೆ ಎಂದರು.

ಮಕ್ಕಳ ಮೇಲೆ ಹೆತ್ತವರು ಪ್ರೀತಿಯ ಜೊತೆಗೆ ವಿಶ್ವಾಸ ಹೊಂದಬೇಕು. ಅವರಿಗೆ ಉತ್ತಮ ಶಿಕ್ಷಣ ನೀಡುವುದೇ ಹೆತ್ತವರ ಗುರಿಯಾಗಬೇಕು. ಯಾವುದೇ ಕ್ಷೇತ್ರಕ್ಕೆ ಹೋದಾಗಲೂ ಕಿರಿಯರು ಹಿರಿಯರಿಂದ ಪಡೆಯುವ ದೊಡ್ಡ ಆಸ್ತಿ ಅನುಭವ. ಅಂತಹ ಅನುಭವವನ್ನು ಪಡೆದುಕೊಂಡು ಬದುಕನ್ನು ಬೆಳಗಿಸುವ ಜೊತೆಗೆ ರಾಷ್ಟ್ರದ ಸಂಸ್ಕೃತಿ ಮತ್ತು ಗೌರವವನ್ನು ಬೆಳಗಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ‘ ವಸಂತ ಬಂಗೇರರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡ ಅಪೂರೂಪದ ರಾಜಕಾರಣಿ. ಓರ್ವ ಶಿಕ್ಷಣ ಪ್ರೇಮಿಯಾಗಿರುವ ಅವರು ಶಿಕ್ಷಣ ಕ್ಷೇತ್ರದ ಸಾಧಕ ಸಂಸ್ಥೆಗಳನ್ನು ಗೌರವಿಸುವ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ. ಗೌರವವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಸಮಾಜವನ್ನು ಮುನ್ನಡೆಸುವ ಜವಾಬ್ಧಾರಿಯನ್ನು ಹೊಂದಬೇಕು ಎಂದರು.

ಕಾರ್ಯಕ್ರಮದ ರೂವಾರಿ ಮಾಜಿ ಶಾಸಕ ಕೆ. ವಸಂತ ಬಂಗೇರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,’ ಈ ದೇಶದಲ್ಲಿ ಪ್ರಾಮಾಣಿಕವಾಗಿ ದುಡಿಯುವ ವರ್ಗ ಶಿಕ್ಷಕ ವರ್ಗವಾಗಿದೆ. ತ್ಯಾಗ ಮನೋಭಾವವನ್ನು ಹೊಂದಿ ಅವರು ಸಲ್ಲಿಸುವ ಸೇವೆಯನ್ನು ಗೌರವಿಸಬೇಕಾದದು ಸಮಾಜದ ಕರ್ತವ್ಯ. ರಾಜ್ಯಕ್ಕೇ ಮಾದರಿಯಾದ ಇಂತಹ ಸಂಸ್ಥೆಯ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಹಾಗೂ ಅದಕ್ಕೆ ಕಾರಣೀಕರ್ತರಾದವರನ್ನು ಗುರುತಿಸುವ ಕೆಲಸವನ್ನು ಮಾಡಿದ್ದೇನೆಯೇ ಹೊರತು ಇದರಲ್ಲಿ ಬೇರೆ ಯಾವುದೇ ದುರುದ್ದೇಶವಿಲ್ಲ ಎಂದರು.

ಸಮಾರಂಭದಲ್ಲಿ ಗುರುವಾಯನಕೆರೆ ಪ್ರೌಢಶಾಲೆಯ ಸ್ಥಾಪನೆಯಲ್ಲಿ ವಿಶೇಷ ಮುತುವರ್ಜಿ ವಹಿಸಿದ ಮಾಜಿ ಸಚಿವ ಗಂಗಾಧರ ಗೌಡ, ಗುರುವಾಯನಕೆರೆ ನಾಗರೀಕ ಸೇವಾ ಟ್ರಸ್ಟ್‍ನ ಅಧ್ಯಕ್ಷ ಕೆ. ಸೋಮನಾಥ ನಾಯಕ್, ಸ್ಥಾಪಕ ಟ್ರಸ್ಟಿ ರಂಜನ್ ರಾವ್ ಯರ್ಡೂರು ಪರವಾಗಿ ಜಯಪ್ರಕಾಶ್ ಭಟ್, ಕರಾವಳಿ ಮಹಿಳಾ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷೆ ವಿದ್ಯಾ ಎಸ್ ನಾಯಕ್, ಹಾಗೂ ಮಚ್ಚಿನ ವಸತಿ ಶಾಲೆ ನಿರ್ಮಾಣಕ್ಕೆ ಕಾರಣೀಕರ್ತರಾದ ಸುಬ್ಬಯ್ಯ ಶೆಟ್ಟಿಯ ವರನ್ನು ಸನ್ಮಾನಿಸಲಾಯಿತು. ಗುರುವಾಯನಕೆರೆ ಸರ್ಕಾರಿ ಪ್ರೌಢಶಾಲೆ  ಮತ್ತು ಮಚ್ಚಿನ ವಸತಿ ಶಾಲೆಯ ಎಲ್ಲಾ ಶಿಕ್ಷಕರರನ್ನು ಮತ್ತು ವಿದ್ಯಾರ್ಥಿಗಳನ್ನು ಈ ಸಂದರ್ಭ ಗೌರವಿಸಲಾಯಿತು.

ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಾಹುಲ್ ಹಮೀದ್, ಧರಣೇಂದ್ರ ಕುಮಾರ್, ನಮಿತಾ, ಶೇಖರ ಕುಕ್ಕೇಡಿ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿನ್ ಇದ್ದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಅಭಿನಂದನಾ ಭಾಷಣ ಮಾಡಿದರು. ಪತ್ರಕರ್ತ ದೇವಿಪ್ರಸಾದ್ ಸ್ವಾಗತಿಸಿ, ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News