ರಾಜ್ಯದ ಎಲ್ಲಾ ವಿವಿಗಳಲ್ಲಿ ಕೌಶಾಲಾಭಿವೃದ್ಧಿ ಕೇಂದ್ರ, ಉದ್ಯೋಗ ನೇಮಕಾತಿ ಘಟಕ: ಸಚಿವ ಜಿ.ಟಿ. ದೇವೆಗೌಡ

Update: 2019-01-13 16:53 GMT

ಬೆಳ್ತಂಗಡಿ, ಜ. 13: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕೌಶಾಲಾಭಿವೃದ್ಧಿ ಕೇಂದ್ರ ಹಾಗೂ ಉದ್ಯೋಗ ನೇಮಕಾತಿ ಘಟಕ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಯೆ ಈಗಾಗಲೇ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಭೆ ಕರೆದು ಸಮಾಲೋಚನಾ ಸಭೆ ನಡೆಸಿ ಆದೇಶ ನೀಡಲಾಗಿದೆ ಎಂದು ಉನ್ನತ ಶಿಕಣ ಸಚಿವಜಿ.ಟಿ. ದೇವೇಗೌಡ ಹೇಳಿದರು.

ಅವರು ರವಿವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಆಶ್ರಯದಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರ ಹತ್ತು ಸಾವಿರ ಮಕ್ಕಳಿಗೆ 6.50 ಕೋಟಿ ರೂ. ಮೊತ್ತದ “ಸುಜ್ಞಾನನಿಧಿ” ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನದ ಚತುರ್ವಿಧದಾನಪರಂಪರೆಯೊಂದಿಗೆ ಕೃಷಿ, ಉದ್ಯಮ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಹೆಗ್ಗಡೆಯವರು ಕ್ರಾಂತಿಕಾರಿ ಸುಧಾರಣೆ ಮಾಡಿದ್ದಾರೆ. ಗ್ರಾಮಾಭಿವೃದ್ಧಿಯೋಜನೆಯ ಆರು ಲಕ್ಷ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು 1400 ಕೋಟಿ ರೂ. ಠೇವಣಿ ಇಟ್ಟಿರುವುದು ಹಾಗೂ 8700 ಕೋಟಿ ರೂ. ಸಾಲ ನೀಡಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿಯಲ್ಲಿ ಯಂತ್ರೋಪಕರಣ ಬಳಕೆ, ಶುದ್ಧುಕುಡಿಯುವ ನೀರಿನ ಘಟಕಗಳು, ಕೆರೆಗಳ ಅಭಿವೃದ್ಧಿ ಇತ್ಯಾದಿ ಯೋಜನೆಗಳು ಕೃಷಿಕರಿಗೆ ಸಂಜೀವಿನಿಯಾಗಿ ಖುಷಿ ನೀಡಿದೆ.ಧರ್ಮಸ್ಥಳದ ಸಿಬ್ಬಂದಿಯ ಶಿಸ್ತು, ಪ್ರಾಮಾಣಿಕತೆ ಹಾಗೂ ದಕ್ಷತೆಯೋಜನೆಯ ಯಶಸ್ಸಿಗೆ ಕಾರಣವಾಗಿದೆ ಧಾರವಾಡದಲ್ಲಿ ಎಸ್.ಡಿ.ಎಂ. ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸಲು ಈಗಾಗಲೇ ಸರ್ಕಾರ ಆದೇಶ ನೀಡಿದೆ ಎಂದು ಸಚಿವರು ಪ್ರಕಟಿಸಿದರು.

ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು ನಾಯಕತ್ವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸ ಬೇಕು. ಸಮಾಜ ಸೇವೆಯೊಂದಿಗೆ ಸಮಾಜದ ಋಣತೀರಿಸಬೇಕು ಎಂದು ಸಚಿವರು ಮಕ್ಕಳಿಗೆ ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಮೂವತ್ತನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ 39 ಕೋಟಿರೂ. ಸುಜ್ಞಾನನಿಧಿ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಅವರು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ವಿದ್ಯಾರ್ಥಿಗಳು ಪರೀಕ್ಷಾ ಭಯವಿಲ್ಲದೆ ನಿರ್ಧಿಷ್ಟಗುರಿಯೊಂದಿಗೆ ತಮಗೆ ಸಿಗುವ ಅವಕಾಶಗಳ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು. ಕುತೂಹಲ ಮತ್ತು ಆಸಕ್ತಿಯಿಂದ ಅಧ್ಯಯನ ಮಾಡಿ ಆದರ್ಶ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು. ದೇವರ ಅನುಗ್ರಹದೊಂದಿಗೆ ನಿರಂತರ ಪರಿಶ್ರಮ ಹಾಗೂ ಪ್ರಯತ್ನ ಮಾಡಿದರೆ ಯಶಸ್ಸುದೊರಕುತ್ತದೆ ಎಂದು ಹೇಳಿದರು.

“ಸುಜ್ಞಾನನಿಧಿ ವೃದ್ಧಿ ಸಂಘ”ಉದ್ಘಾಟಿಸಿದ ಹೇಮಾವತಿ ವಿ. ಹೆಗ್ಗಡೆಯವರು, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಯೆಸುಂದರ ಕನಸು ಕಂಡು ಅದನ್ನು ನನಸಾಗಿ ಮಾಡಲು ನಿರಂತರ ಪ್ರಯತ್ನ ಮಾಡಬೇಕು. ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಯ ತ್ರಿವೇಣಿ ಸಂಗಮದಿಂದ ಯಾವುದೇಕಾರ್ಯದಲ್ಲಿ ಯಶಸ್ಸು ಪಡೆಯಬಹುದು. ಅಜ್ಞಾನ ಮತ್ತು ಬಡತನವನ್ನು ನಿವಾರಿಸುವ ಮಾಂತ್ರಿಕ ಶಕ್ತಿ ಜ್ಞಾನಕ್ಕಿದೆ ಎಂದರು. ವಿಮಲೇಶ್, ಅಕ್ಷಯ್ ಮತ್ತು ಶ್ರೀಕಾಂತ್ 170 ವಿದ್ಯಾರ್ಥಿಗಳು ನೀಡಿದ ಎರಡು ಲಕ್ಷರೂ. ದೇಣಿಗೆಯೊಂದಿಗೆ ಬ್ಯಾಂಕ್ ಪಾಸ್ ಬುಕ್ ಹೇಮಾವತಿ ಹೆಗ್ಗಡೆಯವರಿಗೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ. ಹರಿಶ್‍ಕುಮಾರ್ ಮತ್ತು ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಪ್ರಾಂಶುಪಾಲ ವಿಜಯಕುಮಾರ್ ಶುಭಾಶಂಸನೆ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೊರಗಪ್ಪ ನಾಯ್ಕ್, ತಾಲ್ಲೂಕು ಪಂ. ಸದಸ್ಯೆ ಧನಲಕ್ಷ್ಮೀ ಜನಾರ್ದನ್ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಪ್ರಸಾದ್‍ ಕಾಮತ್ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್. ಮಂಜುನಾಥ್ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News