‘ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ, ಜನರ ಪ್ರಾಣ ಉಳಿಸಿ’: ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ

Update: 2019-01-14 07:55 GMT

ಉಪ್ಪಿನಂಗಡಿ, ಜ.14: ಬೆಂಗಳೂರು- ಮಂಗಳೂರು ನಡುವೆ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವುದನ್ನು ತಕ್ಷಣ ಆರಂಭಿಸಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ, ಜನರ ಪ್ರಾಣ ಉಳಿಸಿ’ ಪಾದಯಾತ್ರೆಗೆ ನೆಲ್ಯಾಡಿಯಲ್ಲಿಂದು ಚಾಲನೆ ದೊರೆಯಿತು.

ನೆಲ್ಯಾಡಿಯಿಂದ ಬಿ.ಸಿ.ರೋಡ್‌ವರೆಗೆ ನಡೆಯಲಿರುವ ಮೂರು ದಿನಗಳ ಪಾದಯಾತ್ರೆಗೆ ಇಂದು ಬೆಳಗ್ಗೆ ನೆಲ್ಯಾಡಿ ಬಸ್ಸು ನಿಲ್ದಾಣದ ಸಮೀಪ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಅಭಿವೃದ್ಧಿ ಸಾಧಿಸುವವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ದಲ್ಲಿದೆ. ರಫೇಲ್ ಹಗರಣದ ಪ್ರಾಮಾಣಿಕ ತನಿಖೆ ನಡೆಸುವ ಇಚ್ಛೆ ಇದ್ದರೆ ಜಂಟಿ ಸಂಸದೀಯ ಸಮಿತಿ ರಚಿಸಲಿ ಎಂದು ಕೇಂದ್ರ ಸರಕಾರಕ್ಕೆ ಸವಾಲೆಸೆದರು‌.
ಕೇಂದ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್  ಸರಕಾರ ನಮ್ಮ ಗುರಿ. ಮುಂದಿನ ಚುನಾವಣೆಯಲ್ಲಿ ದ.ಕ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಸದನ್ನು ಆರಿಸಿ ಜಿಲ್ಲೆಯ ಚಿತ್ರಣವನ್ನು ಬದಲಾಯಿಸುತ್ತೇವೆ. ಕಳೆದ ಬಿಜೆಪಿ ಸಂಸದರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತಗೊಂಡಿವೆ ಎಂದು ಖಾದರ್ ಟೀಕಿಸಿದರು. 

*ಬಿಜೆಪಿಯಿಂದ ದೇವರ ಹೆಸರಿನಲ್ಲಿ ಜನತೆಗೆ ಮೋಸ: ರೈ

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿಜೆಪಿ ದೇವರ ಹೆಸರಿನಲ್ಲಿ ಜನತೆಗೆ ಮೋಸ ಮಾಡುತ್ತಿದೆ. ಧರ್ಮದ ಬಗ್ಗೆ ನಂಬಿಕೆ ಇರುವ ಜನರನ್ನು ವಂಚಿಸುತ್ತಿದೆ. ನಾನು 18 ಬಾರಿ ವ್ರತಾಚರಣೆಯಲ್ಲಿ ತೊಡಗಿ ಶಬರಿಮಲೆಗೆ ಹೋಗಿ ಬಂದವನು. ಬಿಜೆಪಿ ಶಬರಿಮಲೆಯ ವಿಚಾರದಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ನೇತೃತ್ವದ ಕೇಂದ್ರ ಸರಕಾರ ಅಂಬಾನಿ, ಅದಾನಿ ಮೊದಲಾದ ಕಾರ್ಪೊರೇಟ್ ಶಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ. ನೆಹರು ಪ್ರಧಾನಿಯಾಗಿದ್ದಾಗ ಮಂಗಳೂರು ಸಂಸದರಾಗಿದ್ದ ಶ್ರೀ ನಿವಾಸ ಮಲ್ಯರ ಕಾಲದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳು ಅಭಿವೃದ್ಧಿ ಕಾರ್ಯಕ್ರಮ ಗಳು ಅನುಷ್ಠಾನ ಗೊಂಡಿತ್ತು. ಆದರೆ ಕಳೆದ 30 ವರ್ಷಗಳಲ್ಲಿ ಈ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳು ಸಂಪೂರ್ಣ ನಿರ್ಲಕ್ಷ್ಯ ಕ್ಕೀಡಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಆರಂಭಗೊಂಡ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ರಮಾನಾಥ ರೈ ಟೀಕಿಸಿದರು. 

ಈ ಸಂದರ್ಭ ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ ಐವನ್  ಡಿಸೋಜ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಕೆಂಪರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಇತರ ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ನವೀನ್ ಡಿಸೋಜ, ಬಿ.ಎಚ್.ಖಾದರ್, ಮಿಥುನ್‌ ರೈ, ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಕೆ.ಕೆ.ಶಾಹುಲ್, ಮಮತಾ ಗಟ್ಟಿ, ಮಂಜುಳಾ ಮಾವೆ, ಪಿ.ಪಿ.ವರ್ಗೀಸ್, ಸರ್ವೊತ್ತಮ ಗೌಡ, ಡಾ.ರಘು, ವೆಂಕಪ್ಪ ಗೌಡ, ಮುರಳೀಧರ್ ರೈ, ಬಿ.ಎಂ.ಅಬ್ಬಾಸ್ ಅಲಿ, ಗಣೇಶ ಕೈಕುರೆ, ಆಶಾ ಲಕ್ಷ್ಮಣ್, ಮುಸ್ತಫ ಕೆಂಪಿ, ಉಷಾ ಅಂಚನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಲುಕ್ಮಾನ್, ಫ್ಲೋಸಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಪಾದಯಾತ್ರೆಯು ಇಂದು ಸಂಜೆ 4:30ಕ್ಕೆ ಉಪ್ಪಿನಂಗಡಿ ಬಸ್ಸು ನಿಲ್ದಾಣಕ್ಕೆ ತಲುಪಲಿದೆ. ಅಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.  

ಜ.15ರಂದು ಬೆಳಗ್ಗೆ 8:30ಕ್ಕೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಬಳಿಯಿಂದ ಪಾದಯಾತ್ರೆ ಆರಂಭಗೊಂಡು ಸಂಜೆ 4:30ಕ್ಕೆ ಮಾಣಿ ಜಂಕ್ಷನ್ ಬಳಿ ಬಹಿರಂಗ ಸಭೆ ನಡೆಯಲಿದೆ.  

ಜ.16ರಂದು ಬೆಳಗ್ಗೆ ಮಾಣಿ ಜಂಕ್ಷನ್‌ನಿಂದ ಪಾದಯಾತ್ರೆ ಆರಂಭಗೊಂಡು ಸಂಜೆ 4:30ಕ್ಕೆ ಬಿಸಿರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬಹಿರಂಗ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News