ಜ.18-19: ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಶತಮಾನೋತ್ಸವ ವರ್ಷಾಚರಣೆ ಸಮಾರೋಪ

Update: 2019-01-14 08:31 GMT

ಮಂಗಳೂರು, ಜ.14: ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಶತಮಾನೋತ್ಸವದ ವರ್ಷಾಚರಣೆ ಜ.18 ಮತ್ತು 19ರಂದು ಸಮಾರೋಪಗೊಳ್ಳಲಿದೆ ಎಂದು ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಕೆ.ದೇವಾನಂದ ಪೈ ತಿಳಿಸಿದರು.

ಬೆಸೆಂಟ್ ಕಾಲೇಜು ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ.18ರಂದು ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಅಪರಾಹ್ನ 3 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎನ್‌ಎಂಪಿಟಿ ಅಧ್ಯಕ್ಷ ಕೃಷ್ಣ ಬಾಬು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಈಶ್ವರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅಧ್ಯಕ್ಷತೆ ವಹಿಸಲಿರುವರು. ಉದ್ಘಾಟನಾ ಸಮಾರಂಭದ ಬಳಿಕ ಹಳೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜ.19ರಂದು ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಕಾಫಿ ಲ್ಯಾಬ್ ಲಿಮಿಟೆಡ್‌ನ ಅಧ್ಯಕ್ಷೆ ಸುನಾಲಿನಿ ಎನ್. ಮೆನನ್ ಹಾಗೂ ಮುಂಬೈಯ ಟಾಟಾ ಸನ್ಸ್ ಲಿಮಿಟೆಡ್‌ನ ಗ್ರೂಪ್ ಆಫ್ ಚೀಫ್ ಡಿಜಿಟಲ್ ಅಧಿಕಾರಿ ಆರತಿ ಸುಬ್ರಹ್ಮಣ್ಯನ್, ಅತಿಥಿಗಳಾಗಿ ಭಾಗವಹಿಸಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವರು. ಮುಂಬೈಯ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಪ್ರೊ.ರೂಪಾ ಷಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿರುವರು.

ಸಮಾರೋಪ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಸುಪ್ರೀತಾ ಪೂಜಾರಿ, ದೇವದಾಸ್ ಹಾಗೂ ಹಿರಿಯ ಹಳೆ ವಿದ್ಯಾರ್ಥಿಗಳಾದ ಲಲಿತಾ ರೈ, ಡಾ. ಮಾಲತಿ ಹೆಗ್ಡೆ, ವಂದಾ ರಾವ್ ಅವರನ್ನು ಗೌರವಿಸಲಾಗುವುದು ಎಂದು ಅವರು ಹೇಳಿದರು.

1918ರಲ್ಲಿ ಆರಂಭಗೊಂಡ ಬೆಸೆಂಟ್ ಶಿಕ್ಷಣ ಸಂಸ್ಥೆ ಇಂದು ಸಂಧ್ಯಾ ಕಾಲೇಜು, ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊಂದಿದೆ. 2014ರಲ್ಲಿ ಆನ್‌ಲೈನ್ ಎಕ್ಸಾಮಿನೇಶನ್ ಸೆಂಟರ್ ಆರಂಭಿಸಲಾಗಿದ್ದು, ಕನ್ನಡ ಮಾಧ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಥೆಯು ವಿಶೇಷ ಕಾಳಜಿಯನ್ನು ವಹಿಸಿದೆ.

ಕನ್ನಡ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 275 ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ, ಊಟ, ಸಮವಸ್ತ್ರ, ಪುಸ್ತಕವನ್ನು ಆಡಳಿತ ಮಂಡಳಿ ಒದಗಿಸುತ್ತಿದೆ. ಶಿಕ್ಷಣವನ್ನು ವ್ಯವಹಾರವನ್ನಾಗಿಸದೆ ಶ್ರದ್ಧೆಯಿಂದ ಕಳೆದ 100 ವರ್ಷಗಳಿಂದ ಕನ್ನಡ ಮಾಧ್ಯಮ ಶಾಲೆಯನ್ನು ಮುನ್ನಡೆಸಲಾಗುತ್ತಿದೆ ಎಂದು ಶೈಕ್ಷಣಿಕ ಸಲಹೆಗಾರರಾದ ಲಲಿತಾ ಮಲ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಡ್ಪಿ ಜಗದೀಶ್ ಶೆಣೈ, ಸತೀಶ್ ಭಟ್, ನಗರ ನಾರಾಯಣ ಶೆಣೈ, ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News