ಕನ್ಹಯ್ಯ ಕುಮಾರ್, ಇತರರ ವಿರುದ್ಧ ದೇಶವಿರೋಧಿ ಘೋಷಣೆ ಕೂಗಿದ ಆರೋಪ ದಾಖಲು

Update: 2019-01-14 14:47 GMT

ಹೊಸದಿಲ್ಲಿ,ಜ.14: ದಿಲ್ಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ 2016ರಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶವಿರೋಧ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿ ದಿಲ್ಲಿ ಪೊಲೀಸರು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್, ಶೆಹ್ಲಾ ರಶೀದ್ ಹಾಗೂ ಇತರ ಎಂಟು ಮಂದಿಯ ವಿರುದ್ಧ ಸೋಮವಾರ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ, ಶೆಹ್ಲಾ ರಶೀದ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಆರು ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷಿಗಳು ದೊರೆತಿವೆ ಹಾಗಾಗಿ ಈಗ ಈ ಪ್ರಕರಣದಲ್ಲಿ ದೋಷಾರೋಪಣೆ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಸತ್ ಮೇಲೆ ನಡೆದ ದಾಳಿಯ ಮಾಸ್ಟರ್‌ ಮೈಂಡ್ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿರುವುದನ್ನು ವಿರೋಧಿಸಿ ಈ ವಿದ್ಯಾರ್ಥಿಗಳ ವಿರುದ್ಧ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆಡಳಿತಾರೂಡ ಬಿಜೆಪಿಯ ಸೂಚನೆಯಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೃಹತ್ ವಿವಾದವಾಗಿ ಬದಲಾಗಿತ್ತು.

ಈ ಪ್ರಕರಣದಲ್ಲಿ ಕಾಶ್ಮೀರದ ನಿವಾಸಿಗಳಾದ ಆಕೀಬ್ ಹುಸೈನ್, ಮುಜೀಬ್ ಹುಸೈನ್, ಮುನೀಬ್ ಹುಸೈನ್, ಉಮರ್ ಗುಲ್, ರಿಯಾಝ್ ರಸೂಲ್, ಬಶ್ರತ್ ಅಲಿ ಮತ್ತು ಖಾಲಿದ್ ಬಶೀರ್ ಭಟ್ ಎಂಬವರ ಹೆಸರುಗಳನ್ನು ದೋಷಾರೋಪಣೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಪಿಐ ನಾಯಕ ಡಿ.ರಾಜ ಅವರ ಪುತ್ರಿ ಅಪರಾಜಿತ ಸೇರಿದಂತೆ ಇತರ 36 ಆರೋಪಿಗಳ ವಿರುದ್ಧ ಯಾವುದೇ ನೇರ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ತಿಳಿಸಿರುವ ಪೊಲೀಸರು ಆದರೆ ಅವರನ್ನೂ ಪ್ರಶ್ನಿಸಲಾಗುವುದು ಎಂದಿದ್ದಾರೆ. ಬಿಜೆಪಿ ಸಂಸದ ಮಹೇಶ್ ಗಿರಿ ಮತ್ತು ಎಬಿವಿಪಿ ನೀಡಿದ ದೂರಿನ ಹಿನ್ನೆಲೆಯಲ್ಲಿ ವಸಂತ ಕುಂಜ ಪೊಲೀಸ್ ಠಾಣೆಯಲ್ಲಿ ಕನ್ಹಯ್ಯೆ ಕುಮಾರ್ ಸೇರಿದಂತೆ ಹಲವರ ವಿರುದ್ಧ ಫೆಬ್ರವರಿ11, 2016ರಂದು ಐಪಿಸಿ ಸೆಕ್ಷನ್ 124 ಎ (ದೇಶದ್ರೋಹ) ಮತ್ತು 120ಬಿ (ಅಪರಾಧಿ ಸಂಚು) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಮೋದಿಜಿಗೆ ಧನ್ಯವಾದಗಳು!

1,200 ಪುಟಗಳ ದೋಷಾರೋಪಣೆಗೆ ಪ್ರತಿಕ್ರಿಯಿಸಿರುವ ಕನ್ಹಯ್ಯಾ ಕುಮಾರ್ ಇದು ರಾಜಕೀಯ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಈ ಸುದ್ದಿ ನಿಜವಾಗಿದ್ದರೆ ನಾನು ಪೊಲೀಸರು ಮತ್ತು ಮೋದಿಜೀಗೆ ಧನ್ಯವಾದ ಹೇಳಲು ಬಯಸುತ್ತೇನೆ. ಮೂರು ವರ್ಷಗಳ ನಂತರ ಚುನಾವಣೆಯ ಸಮಯದಲ್ಲಿ ದೋಷಾರೋಪಣೆ ಸಲ್ಲಿಸಿರುವುದು ಇದರ ಹಿಂದೆ ರಾಜಕೀಯ ಉದ್ದೇಶ ಇದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ನನಗೆ ಈ ದೇಶದ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎಂದು ಅವರು ತಿಳಿಸಿದ್ದಾರೆ.

ಸರಕಾರದಿಂದ ವೈಫಲ್ಯ ಮುಚ್ಚುವ ಪ್ರಯತ್ನ

ಚುನಾವಣೆಯು ಹತ್ತಿರ ಬರುತ್ತಿದ್ದು ಈ ಸಂದರ್ಭದಲ್ಲಿ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಮತ್ತು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಸರಕಾರ ಪ್ರಯತ್ನಿಸುತ್ತಿದೆ. ನಾವು ಕಾನೂನು ಹೋರಾಟ ನಡೆಸುತ್ತೇವೆ ಮತ್ತು ಮುಗ್ಧರೆಂದು ಸಾಬೀತುಪಡಿಸುತ್ತೇವೆ.

- ಉಮರ್ ಖಾಲಿದ್, ಜೆಎನ್‌ಯು ಮಾಜಿ ವಿದ್ಯಾರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News