ಅಲೆಮಾರಿ ದನಗಳನ್ನು ದತ್ತುಪಡೆಯುವವರನ್ನು ಸನ್ಮಾನಿಸಲಿದೆ ಈ ಸರಕಾರ
ಜೈಪುರ,ಜ.14: ಅಲೆಮಾರಿ ದನಗಳನ್ನು ದತ್ತುಪಡೆದುಕೊಳ್ಳುವವರನ್ನು ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಸನ್ಮಾನಿಸಲು ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರಕಾರ ನಿರ್ಧರಿಸಿದೆ. ಅಲೆಮಾರಿ ದನಗಳನ್ನು ದತ್ತು ಪಡೆಯುವಂತೆ ದಾನಿಗಳು, ಎನ್ ಜಿಒಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಗೋಪ್ರೇಮಿಗಳನ್ನು ಪ್ರೋತ್ಸಾಹಿಸುವಂತೆ ಮತ್ತು ಅವರನ್ನು ಆಗಸ್ಟ್ 15 ಮತ್ತು ಜನವರಿ 26ರಂದು ಸನ್ಮಾನಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಗೋಪಾಲನ ನಿರ್ದೇಶನಾಲಯ ಪತ್ರ ಮುಖೇನ ಸೂಚಿಸಿದೆ.
ರಾಜ್ಯ ಸರಕಾರದ ಗೋಪಾಲನ ನಿರ್ದೇಶನಾಲಯ ಜಾನುವಾರು ಸಂರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಜನರ ಸಹಕಾರದಿಂದ ದನಗಳ ಸಂರಕ್ಷಣೆಯೇ ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ದನಗಳನ್ನು ದತ್ತು ಪಡೆದು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುವವರನ್ನು ಜಿಲ್ಲಾಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಸನ್ಮಾನಿಸಲಿದ್ದಾರೆ ಎಂದು ಗೋಪಾಲನ ನಿರ್ದೇಶನಾಲಯದ ನಿರ್ದೇಶಕ ವಿಶ್ರಮ್ ಮೀನಾ ತಿಳಿಸಿದ್ದಾರೆ.
ದನಗಳನ್ನು ದತ್ತು ಪಡೆಯಲು ಇಚ್ಛಿಸುವವರು ಗೋಶಾಲೆಗಳು ನಿಗದಿಪಡಿಸಿದ ಮೊತ್ತವನ್ನು ಪಾವತಿ ಮಾಡಬೇಕು. ನಂತರ ಅವರಿಗೆ ಬೇಕಾದಾಗ ದನಗಳನ್ನು ನೋಡಲು ಆಗಮಿಸಬಹುದು. ದತ್ತು ಪಡೆದವರು ಬಯಸಿದಲ್ಲಿ ಈ ದನಗಳನ್ನು ಅವರು ತಮ್ಮ ಮನೆಗೂ ಕೊಂಡೊಯ್ಯಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.