ಗೋಮ್ತಿ ನದಿ ಮಾಲಿನ್ಯ: ಸಂಕ್ರಾಂತಿಯಂದು ಪವಿತ್ರಸ್ನಾನ ಮಾಡದ ಭಕ್ತರು
ಲಖ್ನೊ,ಜ.14: ಉತ್ತರ ಪ್ರದೇಶದ ಲಖ್ನೊದಲ್ಲಿರುವ ಗೋಮ್ತಿ ನದಿಯ ನೀರಿನಲ್ಲಿ ವಿಷಕಾರಿ ಅಂಶಗಳು ಸೇರಿರುವ ಹಿನ್ನೆಲೆಯಲ್ಲಿ ಸೋಮವಾರ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಭಕ್ತರು ನದಿಯಲ್ಲಿ ಪವಿತ್ರಸ್ನಾನ ಮಾಡಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನದಿಯ ಶೋಚನೀಯ ಸ್ಥಿತಿಯನ್ನು ಕಂಡು ಆಕ್ರೋಶಗೊಂಡ ಭಕ್ತರು ಕೂಡಲೇ ಸರಕಾರ ನದಿಯನ್ನು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಗೋಮ್ತಿ ನದಿಯನ್ನು ಸ್ವಚ್ಛಗೊಳಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವ ತುರ್ತು ಅವಶ್ಯಕತೆಯಿದೆ. ಈ ನದಿಯ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಸ್ವಚ್ಛತೆ ಬಗ್ಗೆ ಕೇವಲ ಮಾತನಾಡಿದರೆ ಸಾಲದು ಎಂದು ಸ್ಥಳೀಯ ನಿವಾಸಿಯೊಬ್ಬರು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನದಿಯಲ್ಲಿ ಪವಿತ್ರಸ್ನಾನ ಮಾಡಲು ಪ್ರತಿವರ್ಷ 7ರಿಂದ 8 ಸಾವಿರ ಮಂದಿ ಆಗಮಿಸುತ್ತಿದ್ದರು. ಆದರೆ ನದಿ ಮಲಿನಗೊಂಡ ಕಾರಣ ಜನರು ಇಲ್ಲಿಗೆ ಆಗಮಿಸುವುದನ್ನು ನಿಲ್ಲಿಸಿದ್ದಾರೆ. ಸರಕಾರ ಇದನ್ನು ಸರಿಪಡಿಸಲು ಏನಾದರೂ ಕ್ರಮ ಕೈಗೊಳ್ಳಬೇಕು. ಮೊದಲೆಲ್ಲ ಜನರು ಈ ನದಿಯಲ್ಲಿ ದೋಣಿ ವಿಹಾರಕ್ಕೆ ಆಗಮಿಸುತ್ತಿದ್ದರು. ಇದೀಗ ನದಿನೀರಿನಲ್ಲಿ ವಿಷಕಾರಿ ಅಂಶಗಳು ಇರುವುದರಿಂದ ಅದಕ್ಕೂ ಕಡಿವಾಣ ಬಿದ್ದಿದೆ ಎಂದು ಸ್ಥಳೀಯ ನಿವಾಸಿ ಶೈಲೇಶ್ ಕುಮಾರ್ ಖೇದ ವ್ಯಕ್ತಪಡಿಸಿದ್ದಾರೆ.
ಲಖ್ನೊದ ಜೀವನದಿ ಎಂದೇ ಕರೆಯಲಾಗುವ ಗೋಮ್ತಿ ನದಿ ಹರಿಯುವ ಕುಡಿಯ ಘಾಟ್ ನಿಂದ ತುಲಸಿ ಘಾಟ್ ವರೆಗಿನ ಪ್ರದೇಶದಲ್ಲಿ ಜನರು ಮಲಿನಕಾರಕ ವಸ್ತುಗಳನ್ನು ನದಿಗೆಸೆಯುತ್ತಿರುವುದರಿಂದ ನೀರು ಮಲಿನಗೊಂಡಿದೆ. ಜೊತೆಗೆ ನದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದಿರುವ ಕಾರಣ ನೀರಿನ ಹರಿವು ಕೂಡಾ ನಿಂತು ಹೋಗಿರುವುದು ನದಿನೀರು ಕಲುಷಿತಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.