ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಗೆ ಆರ್‌ ಜೆಡಿ ಬೆಂಬಲ: ತೇಜಸ್ವಿ ಯಾದವ್

Update: 2019-01-14 15:02 GMT

ಲಖ್ನೊ,ಜ.14: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮಾಡಿಕೊಂಡಿರುವ ಮೈತ್ರಿಗೆ ರಾಷ್ಟ್ರೀಯ ಜನತಾದಳ ಬೆಂಬಲ ನೀಡುವುದಾಗಿ ಆರ್‌ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಯಾರು ಅಧಿಕಾರಕ್ಕೇರಬೇಕು ಎಂಬುದನ್ನು ಉತ್ತರ ಪ್ರದೇಶ ಮತ್ತು ಬಿಹಾರ ನಿರ್ಧರಿಸಲಿದೆ ಎಂದು ಬಿಹಾರ ಮಾಜಿ ಉಪಮುಖ್ಯಮಂತ್ರಿ ಸೋಮವಾರ ತಿಳಿಸಿದ್ದಾರೆ.

ಕೇವಲ ಉತ್ತರ ಪ್ರದೇಶ ಮಾತ್ರವಲ್ಲ ಇಡೀ ದೇಶಕ್ಕೇ ಈ ಮೈತ್ರಿಯ ಸಂದೇಶ ಹೋಗಿದೆ. ಮುಂದಿನ ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ ಯಾರು ಅಧಿಕಾರ ನಡೆಸುತ್ತಾರೆ ಎನ್ನುವುದನ್ನು ಉತ್ತರ ಪ್ರದೇಶ ಮತ್ತು ಬಿಹಾರದ ಜನರು ನಿರ್ಧರಿಸಲಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ. ರವಿವಾರ ಬಿಎಸ್‌ಪಿ ನಾಯಕಿ ಮಾಯಾವತಿಯವರನ್ನು ಭೇಟಿಯಾಗಿದ್ದ ತೇಜಸ್ವಿ ಯಾದವ್ ಸೋಮವಾರ ಲಕ್ನೋದಲ್ಲಿ ಎಸ್ಪಿ ನಾಯಕ ಅಖಿಲೇಶ್ ಯಾದವ್‌ರನ್ನು ಭೇಟಿಯಾದರು. ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನ ಒಟ್ಟು 134 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂದು ಯಾದವ್ ಭವಿಷ್ಯ ನುಡಿದಿದ್ದಾರೆ.

ಉತ್ತರ ಪ್ರದೇಶ 80 ಲೋಕಸಭಾ ಸ್ಥಾನಗಳನ್ನು ಹೊಂದಿದ್ದರೆ ಬಿಹಾರ 40 ಮತ್ತು ಜಾರ್ಖಂಡ್ 14 ಸ್ಥಾನಗಳನ್ನು ಹೊಂದಿದೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ 115 ಸ್ಥಾನಗಳನ್ನು ಹೊಂದಿದೆ. ಮೈತ್ರಿಯ ಪರಿಣಾಮವಾಗಿ ಬಿಜೆಪಿ ಈ ಬಾರಿ ನೂರು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ತಿಳಿಸಿರುವ ತೇಜಸ್ವಿ ಯಾದವ್, ಉತ್ತರ ಪ್ರದೇಶದಲ್ಲಿ ನಡೆದಿರುವ ಎಸ್ಪಿ-ಬಿಎಸ್ಪಿ ಮೈತ್ರಿಯು ಈ ಬಾರಿ ದೇಶ ಸಂಘ ಪರಿವಾರದ ನಿಯಂತ್ರಣಕ್ಕೆ ಒಳಗಾಗುವುದರಿಂದ ತಪ್ಪಿಸಲಿದೆ ಎಂದು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News