ನಿರ್ದೇಶಕರಿಲ್ಲದ ಸಿಬಿಐ: ಸಚಿವಾಲಯಗಳಿಂದ ನಾಮನಿರ್ದೇಶನಕ್ಕೆ ಸೂಚನೆ

Update: 2019-01-14 15:06 GMT

ಹೊಸದಿಲ್ಲಿ,ಜ.14: ಅಲೋಕ್ ವರ್ಮಾ ಅವರ ವಜಾ ನಂತರ ನಿರ್ದೇಶಕನಿಲ್ಲದೆ ಕಾರ್ಯಾಚರಿಸುತ್ತಿರುವ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯ ಕಾನೂನು ನಿರ್ದೇಶಕರ ಸ್ಥಾನವನ್ನು ತುಂಬಲು ಶೀಘ್ರವಾಗಿ ಹೆಸರುಗಳನ್ನು ಸೂಚಿಸುವಂತೆ ವಿವಿಧ ಸಚಿವಾಲಯಗಳಿಗೆ ಸರಕಾರ ಸೂಚಿಸಿದೆ.

ಹಿಂದಿನ ಕಾನೂನು ನಿರ್ದೇಶಕ ಒ.ಪಿ ವರ್ಮಾ ಕಳೆದ ಡಿಸೆಂಬರ್ 23ರಂದು ತನ್ನ ಅವಧಿಯನ್ನು ಪೂರ್ಣಗೊಳಿಸಿದ್ದರು. ತನಿಖಾ ಸಂಸ್ಥೆಯಲ್ಲಿ ಕಾನೂನು ನಿರ್ದೇಶಕ ಒಂದು ಪ್ರಮುಖ ಹುದ್ದೆಯಾಗಿದೆ. ಸಿಬಿಐ ನಿರ್ದೇಶಕರ ಮಾರ್ಗದರ್ಶನ ಮತ್ತು ನಿಯಂತ್ರಣದಲ್ಲಿ ಕೆಲಸ ಮಾಡುವ ಇವರು ಸಂಸ್ಥೆ ತನಿಖೆ ನಡೆಸುವ ಎಲ್ಲ ಪ್ರಕರಣಗಳಲ್ಲಿ ಕಾನೂನು ಸಲಹೆಗಳನ್ನು ನೀಡುತ್ತಾರೆ. ಜಂಟಿ ಕಾರ್ಯದರ್ಶಿ ಮಟ್ಟ ಅದಕ್ಕಿಂತ ಉನ್ನತ ಹುದ್ದೆಯ ಮತ್ತು ವಿಶೇಷ ಸಾರ್ವಜನಿಕ ಕಾನೂನು ನಿರ್ದೇಶಕರಾಗಿ ನೇಮಕ ಮಾಡಲು ಅರ್ಹರಾಗಿರುವ ಅಧಿಕಾರಿಗಳ ಹೆಸರನ್ನು ಸೂಚಿಸುವಂತೆ ಎಲ್ಲ ಸರಕಾರಿ ಇಲಾಖೆಗಳಿಗೆ ಸಿಬ್ಬಂದಿ ಸಚಿವಾಲಯ ಪತ್ರ ಬರೆದಿದೆ.

ಹೆಸರುಗಳನ್ನು ಜನವರಿ 25ರ ಒಳಗಾಗಿ ಕಳುಹಿಸುವಂತೆ ಸೂಚಿಸಲಾಗಿದೆ. ಕಾನೂನು ನಿರ್ದೇಶಕರ ಆಯ್ಕೆಯನ್ನು ಕೇಂದ್ರ ವಿಚಕ್ಷಣ ಆಯೋಗದ ಸಲಹೆಯಂತೆ ನಡೆಸಲಾಗುತ್ತದೆ. ಇದೇ ಮೊದಲ ಬಾರಿ ಸಿಬಿಐ ನಿರ್ದೇಶಕರು ಮತ್ತು ಕಾನೂನು ನಿರ್ದೇಶಕರಿಲ್ಲದೆ ಕಾರ್ಯಾಚರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐಯಲ್ಲಿ ಹುದ್ದೆಗಳು ಖಾಲಿ ಬಿದ್ದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಂಸದೀಯ ಸಮಿತಿ ತನಿಖಾ ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ತನಿಖಾ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ದರ್ಜೆ, ಕಾನೂನು ಅಧಿಕಾರಿ ಮತ್ತು ತಾಂತ್ರಿಕ ಅಧಿಕಾರಿ ಮಟ್ಟದಲ್ಲಿ ಕ್ರಮವಾಗಿ ಶೇ. 16, 28 ಮತ್ತು 56 ಹುದ್ದೆಗಳು ಖಾಲಿ ಬಿದ್ದಿವೆ ಎಂದು ಸಂಸದೀಯ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News