ಭೀಮಾ - ಕೊರೆಗಾಂವ್ ಹಿಂಸಾಚಾರ: ತೇಲ್ತುಂಬ್ಡೆ ವಿರುದ್ಧದ ಪ್ರಕರಣ ರದ್ದತಿಗೆ ಸುಪ್ರೀಂ ನಕಾರ

Update: 2019-01-14 15:18 GMT

 ಹೊಸದಿಲ್ಲಿ, ಜ.14: ಎಲ್ಗಾರ್ ಪರಿಷದ್- ಕೊರೆಗಾಂವ್ ಭೀಮಾ ಹಿಂಸಾಚಾರ ಪ್ರಕರಣ ಹಾಗೂ ಮಾವೋವಾದಿ ನಕ್ಸಲರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿ ಸಾಮಾಜಿಕ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

  ಅಲ್ಲದೆ ಇದೀಗ ಸಾಗುತ್ತಿರುವ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲೂ ನ್ಯಾಯಾಲಯ ನಿರಾಕರಿಸಿದೆ. ಆದರೆ, ಬಾಂಬೆ ಹೈಕೋರ್ಟ್ ನೀಡಿದ್ದ ಬಂಧನದಿಂದ ವಿನಾಯಿತಿ ಅವಧಿಯನ್ನು ನಾಲ್ಕು ವಾರ ವಿಸ್ತರಿಸಿದೆ. ಈ ಅವಧಿಯಲ್ಲಿ ನಿಯಮಿತ ಜಾಮೀನಿಗಾಗಿ ತೇಲ್ತುಂಬ್ಡೆ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ತಿಳಿಸಿದೆ. ಭೀಮಾ-ಕೊರೆಗಾಂವ್ ಹಿಂಸಾಚಾರ 2018ರ ಜನವರಿ 1ರಂದು ನಡೆದಿತ್ತು. ಇದರ ಹಿಂದಿನ ದಿನ ಪುಣೆಯ ಶನಿವಾರ್‌ವಾಡದಲ್ಲಿ ನಡೆದಿದ್ದ ಎಲ್ಗಾರ್ ಪರಿಷದ್ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಹೋರಾಟಗಾರರು ಪ್ರಚೋದನಕಾರಿ ಭಾಷಣ ಮಾಡಿದ್ದು, ಇದು ಭೀಮಾ-ಕೊರೆಗಾಂವ್ ಹಿಂಸಾಚಾರಕ್ಕೆ ಪ್ರೇರಣೆಯಾಗಿದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News