ಸಮಿತಿ ಸದಸ್ಯನಾಗಲು ಬಯಸಿಲ್ಲ ಎಂದು ಪ್ರಧಾನಿ, ಖರ್ಗೆಗೆ ಹೇಳಿದ್ದ ನ್ಯಾ. ಸಿಕ್ರಿ: ವರದಿ

Update: 2019-01-14 16:02 GMT

ಹೊಸದಿಲ್ಲಿ, ಜ.14: ಅಲೋಕ್ ವರ್ಮರನ್ನು ಸಿಬಿಐ ಮುಖ್ಯಸ್ಥರ ಸ್ಥಾನದಿಂದ ವಜಾಗೊಳಿಸಿದ್ದ ತ್ರಿಸದಸ್ಯ ಉನ್ನತ ಸಮಿತಿಯ ಸದಸ್ಯನಾಗಲು ತಾನು ಬಯಸುವುದಿಲ್ಲ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಪ್ರಧಾನಿ ಮೋದಿಗೆ ಹಾಗೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಹೇಳಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.

ಇದು (ಅಲೋಕ್ ವರ್ಮ ವಿರುದ್ಧದ ಸಭೆ) ಸಂಪೂರ್ಣ ಆಡಳಿತಾಂಗದ ಕಾರ್ಯವಾಗಿದೆ ಎಂದು ಸಿಕ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮೂವರು ಸದಸ್ಯರ ಉನ್ನತ ಸಮಿತಿಯಲ್ಲಿ ಪ್ರಧಾನಿ ಮೋದಿ ವರ್ಮರ ವಜಾ ಪರ ಇದ್ದರೆ, ವಿಪಕ್ಷ ಮುಖಂಡ ಖರ್ಗೆ ವಿರೋಧವಿದ್ದರು. ಆಗ ಸಿಕ್ರಿ ಮತ ನಿರ್ಣಾಯಕವಾಗಿದ್ದು ಅವರು ಪ್ರಧಾನಿ ಮೋದಿಯ ನಿಲುವನ್ನು ಬೆಂಬಲಿಸಿದ್ದರು.

ಇಂತಹ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂದಿನ ದಿನಗಳಲ್ಲಿ ಯಾವುದೇ ನ್ಯಾಯಾಧೀಶರು ಒಪ್ಪಲಾರರು. ಎಲ್ಲಾ ನ್ಯಾಯಾಧೀಶರು ಈ ಪ್ರಕ್ರಿಯೆಯಿಂದ ಹಿಂದೆ ಸರಿಯಲಿದ್ದಾರೆ ಎಂದು ಸಿಕ್ರಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

 ಈ ಮಧ್ಯೆ, ಲಂಡನ್ ಮೂಲದ ಕಾಮನ್‌ ವೆಲ್ತ್ ಸೆಕ್ರೆಟೇರಿಯಟ್ ಆರ್ಬ್ರಿಟ್ರಲ್ ಟ್ರಿಬ್ಯುನಲ್ (ಕಾಮನ್‌ವೆಲ್ತ್ ಸಚಿವಾಲಯ ಮಧ್ಯಸ್ತಿಕೆ ನ್ಯಾಯಮಂಡಳಿ)ಯ ಅಧ್ಯಕ್ಷ/ ಸದಸ್ಯ ಹುದ್ದೆಯಿಂದಲೂ ಸಿಕ್ರಿ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಿವೃತ್ತಿ ಹೊಂದಿದ ಬಳಿಕ ಈ ಹುದ್ದೆಯನ್ನು ಸ್ವೀಕರಿಸಲು ಈ ಹಿಂದೆ ಸಿಕ್ರಿ ಒಪ್ಪಿದ್ದರು. ಆದರೆ ವರ್ಮ ವಜಾ ಪ್ರಕರಣದ ಬಳಿಕ ಈಗ ಸಿಕ್ರಿ ತಮ್ಮ ನಿರ್ಧಾರ ಬದಲಿಸಿದ್ದು, ತನ್ನ ಅಭ್ಯರ್ಥಿತನವನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

53 ಕಾಮನ್‌ ವೆಲ್ತ್ ದೇಶಗಳ ನಡುವಿನ ವ್ಯಾಜ್ಯವನ್ನು ಇತ್ಯರ್ಥ ಪಡಿಸುವ ವೇದಿಕೆ ಇದಾಗಿದ್ದು, ವರ್ಷಕ್ಕೆ ಎರಡು ಅಥವಾ ಮೂರು ವಿಚಾರಣೆ ನಡೆಯುತ್ತದೆ. ಆದರೆ ಇದರ ಅಧ್ಯಕ್ಷರಿಗೆ ಗೌರವಧನ ಇರುವುದಿಲ್ಲ. ಇದೊಂದು ಪ್ರತಿಷ್ಠೆಯ ಹುದ್ದೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News