ಸಿಬಿಐ ಮಧ್ಯಂತರ ನಿರ್ದೇಶಕರಾಗಿ ನಾಗೇಶ್ವರ ರಾವ್ ನೇಮಕ ಆದೇಶ ರದ್ದುಗೊಳಿಸಿ: ಸುಪ್ರೀಂಗೆ ಮನವಿ

Update: 2019-01-14 18:11 GMT

ಹೊಸದಿಲ್ಲಿ, ಜ. 14: ಸಿಬಿಐಗೆ ಮಧ್ಯಂತರ ನಿರ್ದೇಶಕರನ್ನಾಗಿ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರ ರಾವ್ ಅವರನ್ನು ನಿಯೋಜಿಸಿ ಸರಕಾರ ಜನವರಿ 10ರಂದು ನೀಡಿದ ಆದೇಶವನ್ನು ರದ್ದುಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದ ಆರೋಪದಲ್ಲಿ ಸಿಬಿಐಯ ಮುಖ್ಯಸ್ಥರಾಗಿದ್ದ ಅಲೋಕ್ ಕುಮಾರ್ ವರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರದ ಸಮಿತಿ ವಜಾಗೊಳಿಸಿದ ಬಳಿಕ ನೂತನ ನಿರ್ದೇಶಕರನ್ನು ನೇಮಕ ಮಾಡುವ ಜನವರಿ ವರೆಗೆ ಸಿಬಿಐಯ ಮಧ್ಯಂತರ ಮುಖ್ಯಸ್ಥರನ್ನಾಗಿ ಸಿಬಿಐಯ ಹೆಚ್ಚುವರಿ ನಿರ್ದೇಶಕ ರಾವ್ ಅವರನ್ನು ನಿಯೋಜಿಸಲಾಗಿತ್ತು.

ಸಿಬಿಐ ನಿರ್ದೇಶಕರನ್ನು ನಿಯೋಜಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಾತರಿ ನೀಡುವ ನಿರ್ದಿಷ್ಟ ವ್ಯವಸ್ಥೆ ಅಳವಡಿಸುವಂತೆ ಕೋರಿ ಸರಕಾರೇತರ ಸಂಸ್ಥೆ ಕಾಮನ್ ಕಾಸ್ ಹಾಗೂ ಆರ್‌ಟಿಐ ಕಾರ್ಯಕರ್ತ ಅಂಜಲಿ ಭಾರದ್ವಾಜ್ ದೂರು ದಾಖಲಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ, ದೇಶದ ಅತಿ ದೊಡ್ಡ ಪ್ರತಿಪಕ್ಷವಾದ ಕಾಂಗ್ರೆಸ್‌ನ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಉನ್ನತಾಧಿಕಾರದ ಆಯ್ಕೆ ಸಮಿತಿ ಶಿಫಾರಸಿನ ಆಧಾರದಲ್ಲಿ ರಾವ್ ಅವರನ್ನು ಹುದ್ದೆಗೆ ನಿಯೋಜಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಾಗೇಶ್ವರ ರಾವ್ ಅವರ ನಿಯೋಜನೆಯಲ್ಲಿ ಸಮಿತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತೆ ಹಾಗೂ ಇದರ ಯಾವುದೇ ಪಾತ್ರ ಇಲ್ಲದಂತೆ ಕಾಣುತ್ತದೆ. ಸಿಬಿಐ ನಿರ್ದೇಶಕರ ಈ ನಿಯೋಜನೆ ಜಿಎಸ್‌ಪಿಇ ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ ಇದು ಕಾನೂನು ಬಾಹಿರ ಎಂದು ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News