ಇಂದು ಭಾರತಕ್ಕೆ ಆಸೀಸ್ ವಿರುದ್ಧ ಮಾಡು-ಮಡಿ ಪಂದ್ಯ
ಅಡಿಲೇಡ್,ಜ.14: ಟೀಮ್ ಇಂಡಿಯಾ ಆತಿಥೇಯ ಆಸ್ಟ್ರೇಲಿಯ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಮಂಗಳವಾರ ಇಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಇದು ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.
ಶಿಸ್ತಿನ ನೆಲೆಯಲ್ಲಿ ಹಾರ್ದಿಕ್ ಪಾಂಡ್ಯರನ್ನು ಹಠಾತ್ತನೆ ಅಮಾನತುಗೊಳಿಸಿರುವುದು ತಂಡದ ಬ್ಯಾಟಿಂಗ್ ಸರದಿಯ ಸಮತೋಲನದ ಮೇಲೆ ಪರಿಣಾಮ ಬೀರಿದೆ. ಮೊದಲ ಪಂದ್ಯದಲ್ಲಿ ಉಪ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 22ನೇ ಶತಕ ಸಿಡಿಸಿದರೂ ಭಾರತ 34 ರನ್‌ನಿಂದ ಸೋತಿತ್ತು. ಈ ಪಂದ್ಯದಲ್ಲಿ ಎಂಎಸ್ ಧೋನಿ 96 ಎಸೆತಗಳಲ್ಲಿ 51 ರನ್ ಗಳಿಸಿದ್ದರೂ ತಂಡದ ಇನಿಂಗ್ಸ್‌ಗೆ ವೇಗ ನೀಡಲು ವಿಫಲರಾಗಿದ್ದರು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಸರದಿ ತೀವ್ರ ಪರೀಕ್ಷೆಗೆ ಒಳಗಾಗಿತ್ತು. ಅಗ್ರ ಮೂವರು ದಾಂಡಿಗರಾದ ರೋಹಿತ್, ಶಿಖರ್ ಧವನ್ ಹಾಗೂ ಕೊಹ್ಲಿ 2016ರಿಂದ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಧೋನಿ ಸರಾಸರಿ 52.95ರಷ್ಟಿದೆ. 333 ಪಂದ್ಯಗಳಲ್ಲಿ ಆಡಿರುವ ಧೋನಿ ಪ್ರಸಕ್ತ 50.11 ಸರಾಸರಿ ಇದೆ. 4ನೇ ಕ್ರಮಾಂಕದಲ್ಲಿ ಅವರ ವೃತ್ತಿಜೀವನದ ಸ್ಟ್ರೈಕ್‌ರೇಟ್ 94.21 ರಷ್ಟಿದೆ. ಇದು 5 ಹಾಗೂ 6ನೇ ಕ್ರಮಾಂಕಕ್ಕಿಂತ ಹೆಚ್ಚಾಗಿದೆ. ಕಳೆದ ಬಾರಿ 2016ರಲ್ಲಿ ಧೋನಿ ಆಸ್ಟ್ರೇಲಿಯದಲ್ಲಿ 4ನೇ ಕ್ರಮಾಂಕದಲ್ಲಿ 2 ಪಂದ್ಯಗಳನ್ನು ಆಡಿದ್ದರೂ ಕೇವಲ 18 ರನ್ ಗಳಿಸಿದ್ದರು. ಪಾಂಡ್ಯ ಬದಲಿಗೆ ತಮಿಳುನಾಡು ಆಲ್‌ರೌಂಡರ್ ವಿಜಯ್ ಶಂಕರ್ ಸೋಮವಾರ ಮಧ್ಯಾಹ್ನ ಅಡಿಲೇಡ್‌ಗೆ ಬಂದಿಳಿದಿದ್ದಾರೆ. ಅವರು 11ರ ಬಳಗಕ್ಕೆ ಆಯ್ಕೆಯಾಗುವ ಸಾಧ್ಯತೆಯಿಲ್ಲ. ಆಲ್‌ರೌಂಡರ್ ಅಂಬಟಿ ರಾಯುಡು ವಿರುದ್ಧ ಶಂಕಾಸ್ಪದ ಬೌಲಿಂಗ್ ಆರೋಪ ಕೇಳಿಬಂದರೂ ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯಲು ಯಾವುದೇ ಸಮಸ್ಯೆಯಿಲ್ಲ. ದಿನೇಶ್ ಕಾರ್ತಿಕ್ ಬದಲಿಗೆ ಆಲ್‌ರೌಂಡರ್ ಕೇದಾರ್ ಜಾಧವ್ ಆಡುವ 11ರ ಬಳಗ ಸೇರುವ ಸಾಧ್ಯತೆಯಿದೆ. ಭಾರತ ಮೊದಲ ಏಕದಿನದಲ್ಲಿ ಕಣಕ್ಕಿಳಿಸಿದ್ದ ತಂಡವನ್ನೇ ಆಡಿಸುವ ಎಲ್ಲ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಪರದಾಡಿದ್ದ ವೇಗಿ ಖಲೀಲ್ ಅಹ್ಮದ್ ಸೋಮವಾರ ಯಜುವೇಂದ್ರ ಚಹಾಲ್‌ರೊಂದಿಗೆ ನೆಟ್ ಪ್ರಾಕ್ಟೀಸ್ ನಡೆಸಿದ್ದು, ಮತ್ತೊಂದು ಅವಕಾಶ ಪಡೆಯುವ ನಿರೀಕ್ಷೆಯಿದೆ. ಮೊದಲ ಪಂದ್ಯದಲ್ಲಿ ಮೂವರು ವೇಗದ ಬೌಲರ್‌ಗಳ ಪೈಕಿ ಮುಹಮ್ಮದ್ ಶಮಿ ಮಾತ್ರ ಉತ್ತಮ ಪ್ರದರ್ಶನ ನೀಡಿದ್ದರು. ಟೀಮ್ ಮ್ಯಾನೇಜ್‌ಮೆಂಟ್ ರವೀಂದ್ರ ಜಡೇಜರ ಆಲ್‌ರೌಂಡ್ ಪ್ರದರ್ಶನವನ್ನು ನೆಚ್ಚಿಕೊಂಡಿದೆ. ಮುಹಮ್ಮದ್ ಸಿರಾಜ್ ಕೋಚ್ ರವಿ ಶಾಸ್ತ್ರಿ ಹದ್ದಿನಕಣ್ಣಿನಡಿ ದೀರ್ಘ ಅಭ್ಯಾಸ ನಡೆಸಿದ್ದು ಅಹ್ಮದ್ ಜಾಗ ತುಂಬುವ ಸ್ಪರ್ಧೆಯಲ್ಲಿದ್ದಾರೆ.
ಭಾರತದ ಅಗ್ರ ಮೂವರು ದಾಂಡಿಗರು ಉತ್ತಮ ಪ್ರದರ್ಶನ ನೀಡಿದರೆ ಮಧ್ಯಮ ಕ್ರಮಾಂಕದ ದಾಂಡಿಗರ ಒತ್ತಡ ಕಡಿಮೆಯಾಗುತ್ತದೆ. ಕೊಹ್ಲಿ ಅಡಿಲೇಡ್ ಓವಲ್‌ನಲ್ಲಿ ಎಲ್ಲ 3 ಮಾದರಿ ಕ್ರಿಕೆಟ್‌ನಲ್ಲಿ 73.44 ಸರಾಸರಿ ಕಾಯ್ದುಕೊಂಡಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಅವರ ಸರಾಸರಿ 46.66ರಷ್ಟಿದೆ.ಮತ್ತೊಂದೆಡೆ, ಆಸ್ಟ್ರೇಲಿಯ ಅಂತಿಮ-11ರ ಬಳಗವನ್ನು ಪ್ರಕಟಿಸಿಲ್ಲ. ಅನಾರೋಗ್ಯದಿಂದ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ಮಿಚೆಲ್ ಮಾರ್ಷ್ 2ನೇ ಪಂದ್ಯ ಆಡಲಿದ್ದಾರೆ ಎಂದು ಉಪ ನಾಯಕ ಅಲೆಕ್ಸ್ ಕಾರೆ ಹೇಳಿದ್ದಾರೆ.
ಬಹುದಿನದ ಬಳಿಕ ಸಿಡ್ನಿ ಏಕದಿನದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯ ರೋಚಕ ಜಯ ದಾಖಲಿಸಿ ಸರಣಿಯಲ್ಲಿ ಮುನ್ನಡೆ ದಾಖಲಿಸಿದೆ.