ನವಯುಗ ವಿರುದ್ಧ ತೀವ್ರಗೊಂಡ ಪ್ರತಿಭಟನೆ: ಉಪವಾಸ ಸತ್ಯಾಗ್ರಹದಿಂದ ಓರ್ವ ಅಸ್ವಸ್ಥ

Update: 2019-01-15 10:04 GMT

ಪಡುಬಿದ್ರೆ, ಜ. 15 : ಸ್ಥಳೀಯ ವಾಹಗಳಿಗೆ ಹೆಜಮಾಡಿ ಟೋಲ್‍ನಲ್ಲಿ ಟೋಲ್ ವಸೂಲಿ ಮಾಡಬಾರದು ಹಾಗೂ ನವಯುಗ ಕಂಪೆನಿ ಅವೈಜ್ಞಾನಿಕ ಕಾಮಗಾರಿ ನಡೆಸಿದ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾಪು ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಳೆದ ವಾರ ಆರಂಭಗೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ. ಮಂಗಳವಾರ ಉಪವಾಸ ಸತ್ಯಾಗ್ರಹದಲ್ಲಿ ಓರ್ವ ಅಸ್ವಸ್ಥಗೊಂಡ ಘಟನೆ ನಡೆದಿದೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ಕಾಪು ಘಟಕದ ಅಧ್ಯಕ್ಷ ಸಯ್ಯದ್ ನಿಝಮುದ್ದೀನ್, ರಝಾಕ್ ಕಂಚಿನಡ್ಕ ಸೋಮವಾರ ಬೆಳಗ್ಗೆ 10ಗಂಟೆಯಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಸತತ 100 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದರು.

ಮಂಗಳವಾರ ಸಯ್ಯದ್ ನಿಝಾಮ್ ಅವರನ್ನು ಪರೀಕ್ಷಿಸಿದ ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಕ್ತದ ಒತ್ತಡ ಹಾಗೂ ಮಧುಮೇಹ ಹೆಚ್ಚಾಗಿರುವುದಾಗಿ ಹೇಳಿದರು. ಈ ಹಿನ್ನಲೆಯಲ್ಲಿಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಬಂದು ಅಸ್ವಸ್ಥಗೊಂಡ ನಿಝಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರು. ಆದರೆ ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ಈ ಸ್ಥಳದಿಂದ ಕದಲುವುದಿಲ್ಲ. ಜಿಲ್ಲಾಡಳಿತ ಇದುವರೆಗೂ ಪ್ರತಿಭಟನೆಗೆ ಮನ್ನಣೆ ನೀಡಲಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದರು. ಬಳಿಕ ಮನವೊಳಿಸಲು ಪೊಲೀಸರು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪೊಲೀಸರು ನಿಝಾಮ್‍ರನ್ನು ಆಸ್ಪತ್ರೆಗೆ ಒಯ್ಯಲು ಮುಂದಾದಾಗ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಅವರನ್ನು ಆಸ್ಪತ್ರೆಗೆ ಒಯ್ದರು. ಈ ವೇಳೆ ಉಪವಾಸ ಸತ್ಯಾಗ್ರಹವನ್ನು ಅನ್ಸಾರ್ ಅಹಮದ್, ರಝಾಕ್ ಮುಂದುವರಿಸಿದ್ದು, ನಿಝಾಮ್ ಅವರ ಬದಲು ಸುಲೈಮಾನ್ ಉಪವಾಸ ಸತ್ಯಾಗ್ರಹಕ್ಕೆ ಸಾಥ್ ನೀಡಿದ್ದಾರೆ.

ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಕೇಮಾರು ಈಶವಿಠಲ ಸ್ವಾಮೀಜಿ ಅವರು ಭಾಗವಹಿಸಿದ್ದು, ನವಯುಗ ಕಂಪೆನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ನವೀನ್‍ಚಂದ್ರ ಜೆ.ಶೆಟ್ಟಿ, ದಸಂಸ ಮುಖಂಡ ಲೋಕೇಶ್ ಕಂಚಿನಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಹಸನ್ ಬಾವಾ, ಕರುಣಾಕರ ಪೂಜಾರಿ, ಆಸೀಫ್ ಆಪದ್ಬಾಂಧವ ಉಪಸ್ಥಿತರಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News