ವಿಮಾನ ನಿಲ್ದಾಣ ಖಾಸಗೀಕರಣ ಪ್ರಕ್ರಿಯೆ: ನೌಕರರ ಪ್ರತಿಭಟನೆಗೆ ಬಿಡ್‌ದಾರರು ವಾಪಾಸು

Update: 2019-01-15 13:00 GMT

ಮಂಗಳೂರು, ಜ.15: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಕ್ರಿಯೆಯ ಭಾಗವಾಗಿ ಸ್ಥಳ ಭೇಟಿಗೆ ಆಗಮಿಸಿದ್ದ ಮೂರು ಕಂಪನಿಗಳು ವಿಮಾನ ನಿಲ್ದಾಣದ ನೌಕರರ ಪ್ರತಿಭಟನೆಯಿಂದಾಗಿ ಮೌಲ್ಯಮಾಪನ ನಡೆಸದೆ ವಾಪಾಸಾಗಿರುವ ಘಟನೆ ಸೋಮವಾರ ನಡೆದಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ)ಯನ್ನು ಖಾಸಗೀಕರಣಗೊಳಿಸುವ ಹಿನ್ನೆಲೆಯಲ್ಲಿ ಇಂಡಸ್, ಜಿಎಂಆರ್ ಹಾಗೂ ನ್ಯಾಷನಲ್ ಇನ್‌ವೆಸ್ಟ್‌ಮೆಂಟ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ ಸಂಸ್ಥೆಯ ಪ್ರತಿನಿಧಿಗಳು ಸೋಮವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ದೊರೆತ ವಿಮಾನ ನಿಲ್ದಾಣದ ನೌಕರರು ಸಂಘಟಿತರಾಗಿ ಸುಮಾರು 60ಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಪ್ರತಿನಿಧಿಗಳ ತಂಡ ಮೌಲ್ಯಮಾಪನ ಪ್ರಕ್ರಿಯೆ ನಡೆಸದೆ ವಾಪಾಸು ತೆರಳಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಕೆಲ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಭಾಗವಾಗಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಬಿಡ್ ಸಲ್ಲಿಸಿರುವವರು ಆರಂಭಿಕ ಹಂತದಲ್ಲಿ ಆಯಾ ವಿಮಾನ ನಿಲ್ದಾಣಗಳಲ್ಲಿ ಸ್ವತಂತ್ರ ಮೌಲ್ಯ ಮಾಪನ ನಡೆಸಲು ಅವಕಾಶವಿದೆ. ಅದರಂತೆ ಈ ಮೂರು ಸಂಸ್ಥೆಗಳ ಪ್ರತಿನಿಧಿಗಳು ನಿನ್ನೆ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ತಕ್ಷಣ ಅಲ್ಲಿ ಒಟ್ಟು ಸೇರಿದ್ದ ನೌಕರರು ‘‘ಗೋ ಬ್ಯಾಕ್ ಪ್ರೈವೇಟ್ ಪಾರ್ಟೀಸ್, ಗೋ ಬ್ಯಾಕ್’’ ಎಂಬ ಘೋಷಣೆಯೊಂದಿಗೆ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ ಪ್ರತಿನಿಧಿಗಳು ಮೌಲ್ಯಮಾಪನ ಪ್ರಕ್ರಿಯೆ ಕೈಬಿಟ್ಟು ಹಿಂತಿರುಗಿದ್ದಾರೆ.

ಕೇಂದ್ರ ಸರಕಾರವು ಗುವಾಹಟಿ, ಲಕ್ನೋ, ತ್ರಿವೇಂಡ್ರಮ್, ಜೈಪುರ, ಹೈದರಾಬಾದ್ ಜತೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣಕ್ಕೆ ಮುಂದಾಗಿದೆ. ಲಾಭದಲ್ಲಿರುವ, ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಬಗ್ಗೆ ಅಖಿಲ ಭಾರತ ವಿಮಾನ ನಿಲ್ದಾಣ ನೌಕರರ ಸಂಘವು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ ಮಂಗಳೂರಿನಲ್ಲಿಯೂ ಈ ಪ್ರತಿರೋಧ ನೌಕರರ ಸಂಘಟನೆಯಿಂದ ವ್ಯಕ್ತವಾಗಿದೆ.

ಈ ಬಗ್ಗೆ ವಾರ್ತಾಭಾರತಿಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣ ನೌಕರರ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಅರವಿಂದ್, ‘ಹೊಸ ವಿಮಾನ ನಿಲ್ದಾಣವನ್ನು ಖಾಸಗಿಯವರು ನಿರ್ಮಾಣ ಮಾಡುವ ಬಗ್ಗೆ, ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಈಗಾಗಲೇ ಸಾರ್ವಜನಿಕ ಹಿತಾಸಕ್ತಿಯಿಂದ ಲಕ್ಷಾಂತರ ಕೋಟಿ ರೂ.ಗಳನ್ನು ಖರ್ಚು ಮಾಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿರುವ ಲಾಭದಲ್ಲಿರುವ ಸರಕಾರಿ ಸೌಮ್ಯದ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವುದಕ್ಕಷ್ಟೆ ನಮ್ಮ ವಿರೋಧ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಸರಕಾರದ ಈ ಕ್ರಮ ಸಾರ್ವಜನಿಕರಿಗೆ ಮಾತ್ರವಲ್ಲದೆ, ಸಂಸ್ಥೆಯ ನೌಕರರ ಕಲ್ಯಾಣ ದೃಷ್ಟಿಯಿಂದಲೂ ಸಮರ್ಪಕವಾದುದಲ್ಲ. ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ಸಾಕಷ್ಟು ಮೆಚ್ಚುಗೆ ವಿದೇಶಿ ಪ್ರವಾಸಿಗರಿಂದಲೂ ವ್ಯಕ್ತವಾಗುತ್ತಿದೆ. ಹಾಗಿರುವಾಗ ಇದೀಗ ಖಾಸಗೀಕರಣದ ಮೂಲಕ ಇಲ್ಲಿ ವಾಣಿಜ್ಯಾತ್ಮಕ ಚಟುವಟಿಕೆಗಳಿಗೆ ಅವಕಾಶ ನೀಡಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಮಾತ್ರವಲ್ಲದೆ, ನೌಕರರ ಭದ್ರತೆಗೂ ತೊಂದರೆಯಾಗಲಿದೆ. ಆ ಹಿನ್ನೆಲೆಯಲ್ಲಿ ನಿನ್ನೆ ನಮ್ಮ ಪ್ರತಿಭಟನೆ ಯಶಸ್ಸು ಕಂಡಿದೆ’’ ಎಂದು ಅರವಿಂದ್ ತಿಳಿಸಿದ್ದಾರೆ.

‘‘ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣದ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಆದಿಯಾಗಿ ಸಂಬಂಧಫಟ್ಟ ಎಲ್ಲಾ ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ನಗರಕ್ಕೆ ಭೇಟಿ ನೀಡಿದ್ದ ವೇಳೆ ನಮ್ಮ ನಿಯೋಗ ಭೇಟಿ ನೀಡಿ ಖಾಸಗೀಕರಣವನ್ನು ವಿರೋಧಿಸಿತ್ತು. ನೌಕರರ ಸಂಘಟನೆಯ ಅಖಿಲ ಭಾರತ ಹಾಗೂ ಪ್ರಾದೇಶಿಕ ಘಟಕಗಳ ಮಾರ್ಗದರ್ಶನದಂತೆ ನಮ್ಮ ಹೋರಾಟ ಮುಂದುವರಿಯಲಿದೆ’’ ಎಂದು ಅವರು ಹೇಳಿದ್ದಾರೆ.

ಕಾರ್ಯದರ್ಶಿ ಶ್ರವಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಸುನಿಲ್ ಕುಮಾರ್, ಕೋಶಾಧಿಕಾರಿ ಶಕೀಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News